ಝಾನ್ಸಿ: ಕೆಲವು ಸೆಕೆಂಡುಗಳ ರೀಲ್ಸ್ಗಾಗಿ ಮಾಡಿದ ಸಾಹಸವೊಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ವ್ಯಕ್ತಿಯೊಬ್ಬರು ಸುಮಾರು 30 ಅಡಿ ಎತ್ತರದ ಅಣೆಕಟ್ಟೆಯ ಮೇಲಿಂದ ಕೆಳಗೆ ಜಿಗಿದಿದ್ದಾರೆ.
ಝಾನ್ಸಿಯ ಪಹುಜ್ ಅಣೆಕಟ್ಟೆಯ ನೀರಿನ ಪ್ರಮಾಣವನ್ನು ಸರಿಯಾಗಿ ಅಂದಾಜಿಸದೆ ಜಿಗಿದಿದ್ದರಿಂದ 38 ವರ್ಷದ ಪುಷ್ಪೇಂದ್ರ ಎಂಬುವರ ಎರಡೂ ಕಾಲು ಮುರಿದಿವೆ ಎಂದು 'ಎನ್ಡಿಟಿವಿ' ವರದಿ ಮಾಡಿದೆ.
ಪುಷ್ಪೇಂದ್ರ ಅವರು ರೀಲ್ಸ್ ವಿಡಿಯೊ ಮಾಡಲು ಸ್ನೇಹಿತರೊಂದಿಗೆ ಅಣೆಕಟ್ಟೆ ಬಳಿ ತೆರೆಳಿದ್ದರು. ಕ್ಯಾಮೆರಾದಲ್ಲಿ ತೀವ್ರ ಸಾಹಸದ ದೃಶ್ಯ ಸೆರೆಹಿಡಿಯುವ ಭರದಲ್ಲಿ, ವೀಕ್ಷಣಾ ಗೋಪುರದ ರೇಲಿಂಗ್ ಏರಿ ಸುಮಾರು 30 ಅಡಿ ಎತ್ತರದಿಂದ ನೀರಿಗೆ ಜಿಗಿದಿದ್ದಾರೆ.
ನೀರಿನ ಮಟ್ಟ ಕಡಿಮೆಯಿದ್ದ ಕಾರಣ ಪುಷ್ಪೇಂದ್ರ ನೀರಿಗೆ ಬೀಳುವ ಬದಲಾಗಿ, ನೇರವಾಗಿ ಬಂಡೆಗಳ ಮೇಲೆ ಬಿದ್ದಿದ್ದು, ಎರಡೂ ಕಾಲುಗಳು ಮುರಿದಿವೆ.
ಪುಷ್ಪೇಂದ್ರ ಅವರಿಗೆ ಸ್ವತಃ ನೀರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಕಾಲುಗಳನ್ನು ಅಲುಗಾಡಿಸಲು ಸಾಧ್ಯವಾಗದೆ ನೀರಿನಲ್ಲಿ ಮುಳುಗುವ ಅಪಾಯಕ್ಕೆ ಸಿಲುಕಿದ್ದರು. ಕೈಗಳನ್ನು ಬಳಸಿ ತೇಲುತ್ತಾ ದಡಕ್ಕೆ ಬಂದಿದ್ದರು. ಸ್ಥಳದಲ್ಲಿದ್ದರು ತಕ್ಷಣವೇ ಅವರನ್ನು ನೀರಿನಿಂದ ಹೊರಗೆಳೆದ್ದಾರೆ.
ತಕ್ಷಣವೇ ಪುಷ್ಪೇಂದ್ರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಕಾಲು ಮುರಿದಿವೆ. ಒಂದು ಕಾಲಿಗೆ ರಾಡ್ ಅಳವಡಿಸಲಾಗಿದ್ದು, ಮತ್ತೊಂದು ಕಾಲಿನ ಶಸ್ತ್ರಚಿಕಿತ್ಸೆ ನಡೆಸಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.

'ದೇವರು ನಿನ್ನ ಆತ್ಮಕ್ಕೆ ಶಾಂತಿ ನೀಡಲಿ' ಎಂದಿದ್ದ ಸ್ನೇಹಿತ
ಪುಷ್ಪೇಂದ್ರನ ಸ್ನೇಹಿತರು ಈ ಅಪಾಯಕಾರಿ ಸಾಹಸವನ್ನು ವಿಡಿಯೊ ಮಾಡುತ್ತಿದ್ದರು. ಪುಷ್ಪೇಂದ್ರ ಜಿಗಿಯುವ ಹಿಂದಿನ ಕ್ಷಣಗಳು ವಿಡಿಯೊದಲ್ಲಿ ದಾಖಲಾಗಿವೆ. 'ದೇವರು ನಿನ್ನ ಆತ್ಮಕ್ಕೆ ಶಾಂತಿ ನೀಡಲಿ' ಎಂದು ಪುಷ್ಪೇಂದ್ರ ಸ್ನೇಹಿತನೊಬ್ಬ ಹೇಳುತ್ತಿರುವುದು ಸೆರೆಯಾಗಿದೆ.
ಆನ್ಲೈನ್ನಲ್ಲಿ ಕೆಲವೇ ಸೆಕೆಂಡುಗಳ 'ಖ್ಯಾತಿ'ಗಾಗಿ ಮಾಡುವ ದುಸ್ಸಾಹಸವು ಇಡೀ ಜೀವನವನ್ನೇ ಬದಲಾಯಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

