ನವದೆಹಲಿ (PTI): 2030ರ ವೇಳೆಗೆ ದೇಶದ ಇ-ಕಾಮರ್ಸ್ ಮಾರುಕಟ್ಟೆ ಗಾತ್ರವು ₹32.73 ಲಕ್ಷ ಕೋಟಿಗೆ (345 ಬಿಲಿಯನ್ ಡಾಲರ್) ತಲುಪುವ ನಿರೀಕ್ಷೆ ಇದೆ ಎಂದು ವರದಿಯೊಂದು ತಿಳಿಸಿದೆ.
ಕ್ವಿಕ್ ಕಾಮರ್ಸ್ ವಲಯದ ತ್ವರಿತ ವಿಸ್ತರಣೆ ಮತ್ತು ಕೃತಕ ಬುದ್ಧಿಮತ್ತೆಯ ಅಳವಡಿಕೆಯು ವಲಯದ ಬೆಳವಣಿಗೆಗೆ ವೇಗ ನೀಡಿವೆ ಎಂದು ಸಂಶೋಧನಾ ಸಲಹಾ ಸಂಸ್ಥೆ ಇನ್ಫಿಸಂ ಸಿದ್ಧಪಡಿಸಿರುವ 'ಸ್ಮಾರ್ಟ್ ಗ್ರೋತ್ ಇನ್ ಎ ಫಾಸ್ಟ್ ಮಾರ್ಕೆಟ್' ವರದಿ ತಿಳಿಸಿದೆ.
2024ರಲ್ಲಿ ಈ ವಲಯದ ಮಾರುಕಟ್ಟೆ ಗಾತ್ರ ₹11.86 ಲಕ್ಷ ಕೋಟಿ (125 ಬಿಲಿಯನ್ ಡಾಲರ್) ಆಗಿತ್ತು. ಇದರ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್) ಶೇ 18.4ರಷ್ಟು ಇರಲಿದ್ದು, ವಲಯದ ಗಾತ್ರ ಮೂರು ಪಟ್ಟು ಆಗಬಹುದು ಎಂದು ಹೇಳಿದೆ.
ಕಳೆದ ವರ್ಷದಲ್ಲಿ 2,525 ಡಾರ್ಕ್‌ಸ್ಟೋರ್‌ಗಳು (ಸರಕುಗಳ ದಾಸ್ತಾನು ಕೇಂದ್ರ) ದೇಶದಲ್ಲಿ ಇದ್ದವು. ತ್ವರಿತ ಡೆಲಿವರಿ ಸೇವೆಗಾಗಿ ಹೆಚ್ಚುತ್ತಿರುವ ಬೇಡಿಕೆಯಿಂದ ಇದು 2030ರ ವೇಳೆಗೆ 7,500ಕ್ಕೆ ಏರಿಕೆಯಾಗುವ ನಿರೀಕ್ಷೆ ಇದ್ದು, ಇದು ಸಹ ಮೂರು ಪಟ್ಟು ಹೆಚ್ಚಳವಾಗಬಹುದು ಎಂದಿದೆ.
ದೇಶದ ಇ-ಕಾಮರ್ಸ್ ವಲಯದಲ್ಲಿ ಕ್ವಿಕ್ ಕಾಮರ್ಸ್ ವಿಭಾಗವು ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ. 2030ರ ವೇಳೆಗೆ ಇದರ ಮಾರುಕಟ್ಟೆ ಗಾತ್ರ ₹6.64 ಲಕ್ಷ ಕೋಟಿ (70 ಬಿಲಿಯನ್ ಡಾಲರ್) ಆಗಬಹುದು.
ಕ್ವಿಕ್ ಕಾಮರ್ಸ್ ವಲಯದಲ್ಲಿ ಬ್ಲಿಂಕಿಟ್ ಶೇ 44ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು 90 ಕೋಟಿ ಬೇಡಿಕೆಗಳನ್ನು ನಿರ್ವಹಣೆ ಮಾಡಿದೆ. ನಂತರದ ಸ್ಥಾನದಲ್ಲಿ ಜೆಪ್ಟೊ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಇದ್ದು, ಕ್ರಮವಾಗಿ ಶೇ 25 ಮತ್ತು ಶೇ 20ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.
ಆನ್‌ಲೈನ್ ಮೂಲಕ ಖರೀದಿಸುವವರಲ್ಲಿ ಜೆನ್ ಝೀ ತಲೆಮಾರಿನವರು ಮೂರನೇ ಒಂದು ಭಾಗ ಇದ್ದಾರೆ ಎಂದು ತಿಳಿಸಿದೆ.

