ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಮೂರೂವರೆ ದಶಕಗಳ ಕಾಲ ದೂರವಿದ್ದ ಇಬ್ಬರು ಸಹೋದರರನ್ನು ಮತ್ತೆ ಒಂದಾಗಿಸಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.
ವಿಕಲಚೇತನರಾಗಿರುವ ಸೀತಾರಾಮ್, ಬಾಲ್ಯದಲ್ಲೇ ಕುಟುಂಬದಿಂದ ಬೇರ್ಪಟ್ಟು ಪಂಜಾಬ್ ಸೇರಿಕೊಂಡಿದ್ದರು.
ಹೊಟ್ಟೆಪಾಡಿಗಾಗಿ ಖಾಸಗಿ ಶಾಲೆಯಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು. ಕೊನೆಗೆ ಪಂಜಾಬ್ ಸರ್ಕಾರದಲ್ಲೇ ಗ್ರೂಪ್-ಡಿ ನೌಕರಿ ಗಿಟ್ಟಿಸಿಕೊಂಡಿದ್ದರು.
ಆದರೆ, ಮತದಾರರ ಪಟ್ಟಿಯ ವಿಶೇಷ ಪರಿಶೀಲನೆಗೆ ತಮ್ಮ ಹಳೆಯ ಶಾಲಾ ಪ್ರಮಾಣಪತ್ರ ಅಗತ್ಯವಿದ್ದಿದ್ದರಿಂದ 35 ವರ್ಷಗಳ ನಂತರ ಸೀತಾರಾಮ್ ತಮ್ಮ ಸ್ವಗ್ರಾಮ ಮನೋಹರಪುರಕ್ಕೆ ಆಗಮಿಸಿದ್ದರು.
ತಾವು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ್ದರು. ಶಾಲಾ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿದರು. ಅವರ (ಸೀತಾರಾಮ್) ಗುರುತನ್ನು ಖಚಿತಪಡಿಸಿಕೊಳ್ಳಲು ಶಾಲಾ ಸಿಬ್ಬಂದಿ ಗ್ರಾಮಸ್ಥರನ್ನು ಸಂಪರ್ಕಿಸಿದರು. ಈ ವೇಳೆ ಸಿಬ್ಬಂದಿ ಮಾಡಿದ ದೂರವಾಣಿ ಕರೆಯೊಂದು ಸೀತಾರಾಮ್ ಅವರ ಅಣ್ಣ ಕೃಷ್ಣ ಅವರಿಗೆ ತಲುಪಿತು. ಕಳೆದುಹೋದ ತಮ್ಮ ಊರಿಗೆ ಬಂದಿದ್ದಾನೆ ಎಂಬ ಸುದ್ದಿ ಕೇಳಿ ಕೃಷ್ಣ ಖುಷಿಪಟ್ಟರು.
ಶಾಲೆಯ ಆವರಣದಲ್ಲಿ 35 ವರ್ಷಗಳ ನಂತರ ಮುಖಾಮುಖಿಯಾದ ಅಣ್ಣ-ತಮ್ಮಂದಿರು ಒಬ್ಬರನ್ನೊಬ್ಬರು ತಬ್ಬಿಕೊಂಡು ಕಣ್ಣೀರು ಸುರಿಸಿದರು. ಸೀತಾರಾಮ್, ಕೃಷ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರೆ, ಈ ಅಪರೂಪದ ಕ್ಷಣ ಕಂಡು ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾವುಕರಾದರು.
ಅಂತಿಮವಾಗಿ ಇಬ್ಬರೂ ಸಹೋದರರು ಒಂದೇ ಸ್ಕೂಟರ್ ಏರಿ ತಮ್ಮ ಮನೆಗೆ ತೆರಳಿದರು.

