ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಭಯೋತ್ಪಾದಕನನ್ನು ಪಾಕಿಸ್ತಾನದ ಪ್ರಜೆ ಯಾಸಿರ್ ಎಂದು ಗುರುತಿಸಲಾಗಿದೆ.
ನಿಷೇಧಿತ ಲಷ್ಕರ್-ಎ-ತಯಬಾ ಸಂಘಟನೆಯೊಂದಿಗೆ ಯಾಸಿರ್ ನಂಟು ಹೊಂದಿದ್ದ. 2024ರಲ್ಲಿ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಬೆಂಗಾವಲು ಪಡೆ ಮೇಲಿನ ದಾಳಿ ಸೇರಿದಂತೆ ನಾಗರಿಕರ ಮೇಲಿನ ದಾಳಿಗಳಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ಚಲನವಲನ ಕುರಿತಂತೆ ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಗುರುವಾರ 'ಆಪರೇಷನ್ ಅಷ್ದಾರ್' ಕಾರ್ಯಾಚರಣೆ ಆರಂಭಿಸಿದ್ದವು. ಅರಣ್ಯ ಪ್ರದೇಶದಲ್ಲಿ ಶೋಧ ನಡೆಸುವಾಗ ಉಗ್ರರ ಚಲನವಲನದ ಬಗ್ಗೆ ಕುರುಹು ಲಭ್ಯವಾಗಿತ್ತು.
ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು. ಈ ವೇಳೆ ಒಬ್ಬ ಉಗ್ರ ಮೃತಪಟ್ಟಿದ್ದಾನೆ. ಕಾರ್ಯಾಚರಣೆ ಮುಂದುವರಿದಿದೆ' ಎಂದು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದರು.
ಪೀರ್ ಪಂಜಾಲ್ ಶ್ರೇಣಿಯ 12ರಿಂದ 15 ಸಾವಿರ ಅಡಿ ಎತ್ತರದಲ್ಲಿರುವ ಘಟನಾ ಸ್ಥಳದಲ್ಲಿ ಮತ್ತೊಬ್ಬ ಉಗ್ರ (ಮೂಸಾ) ಅಡಗಿರುವ ಶಂಕೆ ಇದ್ದು, ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ ಎಂದು ತಿಳಿದುಬಂದಿದೆ.
2024ರಲ್ಲಿ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಬೆಂಗಾವಲು ಪಡೆ ಮೇಲಿನ ದಾಳಿ, ಸೋನಮಾರ್ಗ್ ಬಳಿ ನಡೆದ ಕಾರ್ಮಿಕರ ಮೇಲಿನ ದಾಳಿ ಮತ್ತು ಗುಲ್ಮಾರ್ಗ್ ಬಳಿಯ ಬೋಟಾ ಪತ್ರಿಯಲ್ಲಿ ಸೇನೆ ಮೇಲೆ ನಡೆದ ದಾಳಿಯಲ್ಲಿ ಯಾಸಿರ್ ಭಾಗಿಯಾಗಿದ್ದ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
2024ರ ಮೇ 4ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನ್‌ಕೋಟ್ ಪ್ರದೇಶದಲ್ಲಿ ಯೋಧರು ಸನೈ ಟಾಪ್‌ನಲ್ಲಿರುವ ಸೇನಾನೆಲೆಗೆ ಹಿಂತಿರುಗುತ್ತಿದ್ದಾಗ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐಎಎಫ್ ಸಿಬ್ಬಂದಿಯೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು.
2024ರ ಅಕ್ಟೋಬರ್ 20ರಂದು ಸೋನಮಾರ್ಗ್‌ನ ಗಂಗಾಂಗೀರ್‌ನಲ್ಲಿ ಸ್ಥಳೀಯ ವೈದ್ಯರೊಬ್ಬರು ಸೇರಿದಂತೆ ಏಳು ಜನರನ್ನು ಭಯೋತ್ಪಾದಕರ ಗುಂಪೊಂದು ಗುಂಡಿಕ್ಕಿ ಕೊಂದಿತ್ತು.
ಲಷ್ಕರ್-ಎ-ತಯಬಾ ಕಮಾಂಡರ್ ಜುನೈದ್ ಅಹಮದ್ ಭಟ್ ನೇತೃತ್ವದ ಭಯೋತ್ಪಾದಕ ಗುಂಪಿನಲ್ಲಿ ಯಾಸಿರ್ ಗುರುತಿಸಿಕೊಂಡಿದ್ದ. 2024ರ ಡಿಸೆಂಬರ್ 3ರಂದು ಶ್ರೀನಗರದ ಹೊರವಲಯದ ದಾಚಿಗಾಮ್ ಅರಣ್ಯದಲ್ಲಿ ಭದ್ರತಾ ಪಡೆಗಳು ಜುನೈದ್‌ನನ್ನು ಗುಂಡಿಕ್ಕಿ ಕೊಂದಿದ್ದವು.
2024ರ ಅಕ್ಟೋಬರ್ 24ರಂದು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಬಳಿಯ ಬೋಟಾ ಪತ್ರಿ ಪ್ರದೇಶದಲ್ಲಿ ಯಾಸಿರ್ ಸೇರಿದಂತೆ ಭಯೋತ್ಪಾದಕರ ಗುಂಪೊಂದು ಭಾರತೀಯ ಸೇನಾ ವಾಹನದ ಮೇಲೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಮೂವರು ಯೋಧರು ಸೇರಿದಂತೆ ಐವರು ಮೃತಪಟ್ಟಿದ್ದರು.

