ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ' ಎಂಬ ಹೇಳಿಕೆಗೆ ಬಿಜೆಪಿ ಸಂಸದೆ ಬನ್ಸೂರಿ ಸ್ವರಾಜ್ ನೀಡಿದ್ದ ಪ್ರತಿಕ್ರಿಯೆ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಸ್ವರಾಜ್ ಅವರ ಹೇಳಿಕೆಯ ವಿಡಿಯೊಗೆ ನಟ ಹೃತಿಕ್ ರೋಷನ್ ನೀಡಿರುವ ಐದು ಪದಗಳ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಪುಣೆಯಲ್ಲಿ ನಡೆದ 'ಛಾತ್ರೋನ್ ಕಿ ಗೂಂಜ್' (ವಿದ್ಯಾರ್ಥಿಗಳ ದನಿ) ಕಾರ್ಯಕ್ರಮದಲ್ಲಿ ಮಹಿಳೆಯರಿಗೆ 'ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ' ಎಂದು ರಾಹುಲ್ ಗಾಂಧಿ ಕರೆ ನೀಡಿದ್ದರು. ಇದನ್ನು ಟೀಕಿಸಿದ್ದ ಬನ್ಸೂರಿ ಸ್ವರಾಜ್, ರಾಹುಲ್ ಅವರಿಗೆ 'ವಂದೇ ಮಾತರಂ' ಗೀತೆಯ ಎಲ್ಲ ಆರು ಚರಣಗಳನ್ನು ಹಾಡುವಂತೆ ಸವಾಲು ಹಾಕಿದ್ದರು.
'ಏನು? ಇದು ನಿಜವೇ? ವಾವ್' ಎಂದು ಹೃತಿಕ್ ರೋಷನ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂವಹನ ವಿಭಾಗದ ರಾಷ್ಟ್ರೀಯ ಸಂಚಾಲಕಿ ರುಚಿರಾ ಚತುರ್ವೇದಿ ಅವರು ಸುಮಾರು ಒಂದು ತಿಂಗಳ ಹಿಂದೆ ಸ್ವರಾಜ್ ಅವರ ವಿಡಿಯೊವನ್ನು ಹಂಚಿಕೊಂಡಿದ್ದರು. ಅದಕ್ಕೆ ಹೃತಿಕ್ ಪ್ರತಿಕ್ರಿಯಿಸಿದ್ದರು.
ಆಗಸ್ಟ್ ನಲ್ಲಿ ನೀಡಲಾಗಿದ್ದ ಸ್ವರಾಜ್ ಅವರ ಹೇಳಿಕೆ, ಹೃತಿಕ್ ಅವರ ಪ್ರತಿಕ್ರಿಯೆಯ ಬಳಿಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ವರದಿ ಬರೆಯುವ ವೇಳೆಗೆ ಹೃತಿಕ್ ಅವರ ಕಾಮೆಂಟ್ 10,000ಕ್ಕೂ ಹೆಚ್ಚು 'ಲೈಕ್ಸ್' ಹಾಗೂ 100ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿತ್ತು.
'ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸ ಮಾಡಿ'
ಆಗಸ್ಟ್ 22ರಂದು ಯುವತಿಯರ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ತಾವು 'ಮನುಸ್ಮೃತಿ ಮನಸ್ಥಿತಿ' ಎಂದು ಬಣ್ಣಿಸಿದ ವಿಚಾರವನ್ನು ಟೀಕಿಸಿದ್ದರು.
ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯ ವೇಳೆ ಹುಡುಗರೂ ನಿಂದನಾತ್ಮಕ ಭಾಷೆ ಬಳಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಹುಡುಗಿಯರನ್ನು ಮಾತ್ರ ಪ್ರತ್ಯೇಕವಾಗಿ ಗುರಿಯಾಗಿಸಿದ್ದರು ಎಂದು ರಾಹುಲ್ ಆರೋಪಿಸಿದ್ದರು.
ಮಹಿಳೆಯರನ್ನು ಪಂಜರದೊಳಗೆ ಬಂಧಿಸಿಡಲು ಬಯಸುವ ಹಾಗೂ ಹಿಂದೂ ಸಮಾಜಕ್ಕೆ ನಿಯಮಗಳು ಮತ್ತು ಸಾಮಾಜಿಕ ಮಾನದಂಡಗಳನ್ನು ರೂಪಿಸುವ ಪ್ರಾಚೀನ ಸಂಸ್ಕೃತ ಗ್ರಂಥವಾದ 'ಮನುಸ್ಮೃತಿ'ಯ ಪ್ರಭಾವಕ್ಕೊಳಗಾದ ಮನಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದರು.
'ಹುಡುಗಿಯರು ನಿಂದನಾತ್ಮಕ ಮಾತುಗಳನ್ನು ಬಳಸಿದ್ದರಿಂದ ತಮಗೆ ಸಾಂಸ್ಕೃತಿಕ ಆಘಾತವಾಯಿತು ಎಂದು ಪ್ರಧಾನಿ ಹೇಳಿದರು. ಹಾಗಾದರೆ ಹುಡುಗರು ನಿಂದಿಸಿದರೆ ಸಮಸ್ಯೆಯಿಲ್ಲವೇ?' ಎಂದು ರಾಹುಲ್ ಪ್ರಶ್ನಿಸಿದ್ದರು.
ತಮ್ಮ ಮತ್ತು ತಮ್ಮ ದಿವಂಗತ ತಾಯಿಯ ವಿರುದ್ಧ ಮಹಿಳೆಯರು ನಿಂದನಾತ್ಮಕ ಪದಗಳನ್ನು ಬಳಸಿರುವುದು ಭಾರತಕ್ಕೆ 'ಸಾಂಸ್ಕೃತಿಕ ಆಘಾತ' ಎಂದು ಪ್ರಧಾನಿ ಮೋದಿ ಹೇಳಿದ್ದ ವಿಡಿಯೊವನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದರು. ಆದರೂ, ಪ್ರಧಾನಿಯವರು ತಾವು ವಿದ್ಯಾರ್ಥಿಗಳನ್ನು 'ಕ್ಷಮಿಸುವುದಾಗಿ' ಹೇಳಿದ್ದರು.
ಈ ಸಂದರ್ಭದಲ್ಲಿ ಮಹಿಳೆಯರು ಎದುರಿಸುವ ಹಿಂಸಾಚಾರ ಮತ್ತು ಅವಮಾನಗಳ ಕುರಿತು ರಾಹುಲ್ ವಿಸ್ತೃತವಾಗಿ ಮಾತನಾಡಿದ್ದರು.
'ಪಿತೃಪ್ರಧಾನ ವ್ಯವಸ್ಥೆಯು ನಿಮ್ಮನ್ನು ತುಳಿಯುತ್ತದೆ, ಭಯಭೀತಗೊಳಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಈ ಪಿತೃಪ್ರಧಾನ ವ್ಯವಸ್ಥೆಯನ್ನು ಬುಡಮೇಲು ಮಾಡಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ನಿಮಗೆ ನನ್ನ ಸಂದೇಶ ಸರಳವಾಗಿದೆ-ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸ ಮಾಡಿ' ಎಂದು ರಾಹುಲ್ ಗಾಂಧಿ ಅವರು ಹೇಳಿದ್ದರು.
'ವಂದೇ ಮಾತರಂ' ಹಾಡುವಂತೆ ಸವಾಲು
ರಾಹುಲ್ ಅವರ ಹೇಳಿಕೆ ಹಲವು ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿತ್ತು. ಈ ಸಂದರ್ಭದಲ್ಲಿ ಬನ್ಸೂರಿ ಸ್ವರಾಜ್ ಅವರು ವಿಶಿಷ್ಟ ಸವಾಲು ಹಾಕಿದ್ದರು.
'ನೀವು ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸ ಮಾಡಲು ಬಯಸುವುದಾದರೆ, ಸಂಪೂರ್ಣ 'ವಂದೇ ಮಾತರಂ' ಗೀತೆಯನ್ನು ಹಾಡುವಂತೆ ನಾನು ನಿಮಗೆ ಸವಾಲು ಹಾಕುತ್ತೇನೆ. 'ವಂದೇ ಮಾತರಂ' ಅನ್ನು ಪೂರ್ತಿಯಾಗಿ ಹಾಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ' ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.
ರಾಹುಲ್ ಅವರ 'ಪಿತೃಪ್ರಧಾನ ವ್ಯವಸ್ಥೆ' ಕುರಿತ ಹೇಳಿಕೆಯನ್ನು 'ವಂದೇ ಮಾತರಂ'ನ ಕೇವಲ ಎರಡು ಚರಣಗಳನ್ನು ಹಾಡುವ ಕಾಂಗ್ರೆಸ್ ನ ನಿರ್ಧಾರದೊಂದಿಗೆ ಸ್ವರಾಜ್ ತಳುಕು ಹಾಕಿದ್ದರು. ಸಾರ್ವಜನಿಕ ಸಭೆಗಳು ಹಾಗೂ ಅಧಿಕೃತ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ'ನ ಎಲ್ಲ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಸಾಂವಿಧಾನಿಕ ಬದಲಾವಣೆಯನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂಬ ರೀತಿಯಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು.
ಆ ಸಂದರ್ಭದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಸ್ವರಾಜ್ ಅವರ ಹೇಳಿಕೆಯನ್ನು ವ್ಯಾಪಕವಾಗಿ ಪ್ರಸ್ತಾಪಿಸಿತ್ತು. 'ಅವರು ಏನು ಹೇಳುತ್ತಿದ್ದಾರೆ ಎಂಬುದು ಅವರಿಗಾದರೂ ತಿಳಿದಿದೆಯೇ? ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸ ಮಾಡುವುದಕ್ಕೂ 'ವಂದೇ ಮಾತರಂ'ಗೂ ಏನು ಸಂಬಂಧ?' ಎಂದು ರುಚಿರಾ ಚತುರ್ವೇದಿ ವಿಡಿಯೊದೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ
ಹೃತಿಕ್ ಅವರ ಪ್ರತಿಕ್ರಿಯೆಯ ಬಳಿಕ ಈ ವಿಚಾರ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಬಂದಿದೆ.
'ಅವರಿಗೆ ಪಿತೃಪ್ರಧಾನ ವ್ಯವಸ್ಥೆ (patriarchy) ಮತ್ತು ದೇಶಭಕ್ತಿ (patriotism) ನಡುವಿನ ವ್ಯತ್ಯಾಸವೇ ತಿಳಿದಿಲ್ಲ' ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
'ನಾನು ಉತ್ತಮ ಸಂಗೀತಗಾರನಾಗಲು ಬಯಸುತ್ತೇನೆ, ಹಾಗಾಗಿ ನಾನು ಪಿಝ್ಝಾ ಆರ್ಡರ್ ಮಾಡುತ್ತೇನೆ' ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
'ದಯವಿಟ್ಟು ಯಾರಾದರೂ ಅವರಿಗೆ ಸ್ತ್ರೀವಾದ (feminism) ಮತ್ತು ರಾಷ್ಟ್ರೀಯತೆ (nationalism) ಸಂಪೂರ್ಣವಾಗಿ ಭಿನ್ನವಾದ ವಿಷಯಗಳು ಎಂದು ತಿಳಿಸಿ' ಎಂದು ಮತ್ತೊಬ್ಬರು ಹೇಳಿದ್ದಾರೆ.
ಬನ್ಸೂರಿ ಸ್ವರಾಜ್ ಅವರು 'ಪಿತೃಪ್ರಧಾನ ವ್ಯವಸ್ಥೆ' ಮತ್ತು 'ವಂದೇ ಮಾತರಂ' ನಡುವಿನ ಸಂಬಂಧವನ್ನು ಸ್ಪಷ್ಟಪಡಿಸಿಲ್ಲ. ಆದರೆ ಹೃತಿಕ್ ಅವರ ಪ್ರತಿಕ್ರಿಯೆಯ ಬಳಿಕ ಇಂಟರ್ನೆಟ್ ಬಳಕೆದಾರರು ತಮ್ಮದೇ ಆದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

