HEALTH TIPS

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.9ರಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯೋಚಿಸಿದ್ದರು: ಸುಪ್ರೀಂ ಕೋರ್ಟ್ ಕಾರ್ಯಪಡೆ ಸಮೀಕ್ಷೆ

ನವದೆಹಲಿ:  ಸರ್ವೋಚ್ಚ ನ್ಯಾಯಾಲಯವು ನೇಮಿಸಿದ ರಾಷ್ಟ್ರೀಯ ಕಾರ್ಯಪಡೆಯು (ಎನ್‌ಟಿಎಫ್) ನಡೆಸಿದ ದೇಶವ್ಯಾಪಿ ಸಮೀಕ್ಷೆಯ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಶೇ.9ರಷ್ಟು ವಿದ್ಯಾರ್ಥಿಗಳು ತಾವು ಕಳೆದ ವರ್ಷ ಆತ್ಮಹತ್ಯೆಯ ಆಲೋಚನೆಗಳನ್ನು ಮಾಡಿದ್ದಾಗಿ ತಿಳಿಸಿದ್ದಾರೆ. 


ಇದೇ ವೇಳೆ ಸುಮಾರು ಶೇ.15 ರಷ್ಟು ವಿದ್ಯಾರ್ಥಿಗಳು ಕಳೆದ ಆರು ತಿಂಗಳಲ್ಲಿ ಸುದೀರ್ಘ ಸಂಕಟ, ಖಿನ್ನತೆ ಅಥವಾ ಆತಂಕವನ್ನು ಅನುಭವಿಸಿದ್ದಾರೆ.

ಸುದ್ದಿಸಂಸ್ಥೆ ಪಿಟಿಐಗೆ ಲಭ್ಯವಾಗಿರುವ ಈ ವಿವರಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಳವಳಗಳನ್ನು ಪರಿಶೀಲಿಸಲು ಮತ್ತು ಆತ್ಮಹತ್ಯೆಗಳನ್ನು ತಡೆಯಲು ಕ್ರಮಗಳನ್ನು ಶಿಫಾರಸು ಮಾಡಲು ರಚಿಸಲಾದ ಎನ್‌ಟಿಎಫ್ ನಡೆಸುತ್ತಿರುವ ಮೌಲ್ಯಮಾಪನದ ಭಾಗವಾಗಿದೆ. ಅದು ತನ್ನ ಅಂತಿಮ ವರದಿಯನ್ನು ಅ.31ರೊಳಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ನಿರೀಕ್ಷೆಯಿದೆ.

2.43 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ ಈ ಸಮೀಕ್ಷೆಯಲ್ಲಿ, ಶೇ.34ರಷ್ಟು ವಿದ್ಯಾರ್ಥಿಗಳು ತಮಗೆ ಕ್ಯಾಂಪಸ್‌ನಲ್ಲಿ ಪರಕೀಯರಂತೆ ಭಾಸವಾಗಿತ್ತು ಎಂದು ತಿಳಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಸುಮಾರು ಶೇ.67ರಷ್ಟು ವಿದ್ಯಾರ್ಥಿಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದವರಾಗಿದ್ದಾರೆ.

ಕಾರ್ಯಪಡೆಯು ಸಂಸ್ಥೆಗಳ ಬೆಂಬಲದ ಕುರಿತು ಕಳವಳಗಳನ್ನೂ ಬೆಟ್ಟು ಮಾಡಿದೆ. ಶೇ.56ರಷ್ಟು ವಿದ್ಯಾರ್ಥಿಗಳು ತಮ್ಮ ಆಡಳಿತ ಮಂಡಳಿಯ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದರೆ, ಶೇ.32ರಷ್ಟು ವಿದ್ಯಾರ್ಥಿಗಳು ಸಂಸ್ಥೆಗಳು ಕೌನ್ಸೆಲಿಂಗ್ ಸೇವೆಗಳನ್ನು ಒದಗಿಸುತ್ತಿಲ್ಲ ಎಂದು ಹೇಳಿದ್ದಾರೆ.

ಶೈಕ್ಷಣಿಕ ಒತ್ತಡ, ಉದ್ಯೋಗದ ಅನಿಶ್ಚಿತತೆ ಮತ್ತು ವೃತ್ತಿಜೀವನ ಆಯ್ಕೆಗಳ ಕುರಿತು ಕಳವಳಗಳು ಪ್ರಮುಖ ಸಮಸ್ಯೆಗಳಾಗಿ ಹೊರಹೊಮ್ಮಿವೆ.

ಆದಾಗ್ಯೂ, ಪ್ರಸ್ತುತ ಮಾದರಿಯು ಸಂಪೂರ್ಣ ವಿದ್ಯಾರ್ಥಿ ಸಮೂಹವನ್ನು ಪ್ರತಿನಿಧಿಸದ ಕಾರಣ ಸಮೀಕ್ಷೆಯಲ್ಲಿ ಕಂಡು ಬಂದಿರುವ ಅಂಶಗಳನ್ನು ತಾತ್ಕಾಲಿಕ ಮತ್ತು ಪ್ರಾಥಮಿಕವೆಂದು ಪರಿಗಣಿಸಬೇಕೆಂದು ಎನ್‌ಟಿಎಫ್ ಸ್ಪಷ್ಟಪಡಿಸಿದೆ. ಇನ್ನೂ ಹಲವು ಪ್ರತಿಕ್ರಿಯೆಗಳ ವಿಶ್ಲೇಷಣೆ ನಡೆಯುತ್ತಿದೆ.

ಆದರೂ, ವಿದ್ಯಾರ್ಥಿಗಳಿಗೆ ಬೆಂಬಲ ವ್ಯವಸ್ಥೆಯನ್ನು ಬಲಪಡಿಸಲು ತಕ್ಷಣದ ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿ ತಿಳಿಸಿದರು. ಅಧ್ಯಾಪಕರ ತರಬೇತಿ, ಮಾನಸಿಕ ಆರೋಗ್ಯದ ಮೇಲಿನ ಕಳಂಕ ನಿವಾರಣೆ, ಬಿಕ್ಕಟ್ಟು-ಪ್ರತಿಕ್ರಿಯೆ ಶಿಷ್ಟಾಚಾರಗಳು ಮತ್ತು ಪಾರದರ್ಶಕ ಸಾಂಸ್ಥಿಕ ಆಡಳಿತಗಳು ಇವುಗಳಲ್ಲಿ ಸೇರಿವೆ.

ಎನ್‌ಟಿಎಫ್ ಈವರೆಗೆ ಕರ್ನಾಟಕ, ದಿಲ್ಲಿ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಲ್ಲಿಯ 19 ಶಿಕ್ಷಣ ಸಂಸ್ಥೆಗಳಲ್ಲಿ 30 ಸಭೆಗಳನ್ನು ನಡೆಸಿದೆ. ಪ್ರಾತಿನಿಧ್ಯದ ಮಿತಿಗಳ ನಡುವೆಯೂ ವಿದ್ಯಾರ್ಥಿಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಕಾಳಜಿಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ ಎಂದು ಎನ್‌ಟಿಎಫ್ ಹೇಳಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries