ನವದೆಹಲಿ: ಸರ್ಕಾರದಿಂದ ಕಾನೂನುಬದ್ಧ ಮನವಿ ಬಂದ ಬಳಿಕ, ಮೆಟಾ ಒಡೆತನದ ಇನ್‌ಸ್ಟಾಗ್ರಾಮ್, ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ ಎಂದು ವರದಿಯಾಗಿದೆ.
ಸತೀಶ್ ಆಚಾರ್ಯ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ತೆರೆಯಲು ಸಾಧ್ಯವಾಗುತ್ತಿಲ್ಲ.
ಖಾತೆಯ ಪ್ರವೇಶವನ್ನು ಸ್ಥಳೀಯ ಕಾನೂನಿನ ಕಾರಣಕ್ಕೆ ನಿರ್ಬಂಧಿಸಲಾಗಿದೆ ಎಂದು ಇನ್‌ಸ್ಟಾಗ್ರಾಮ್ ಸಂದೇಶದಲ್ಲಿ ತಿಳಿಸಿದೆ. ವಿಷಯವನ್ನು ಪರಿಶೀಲಿಸಿದ ಬಳಿಕ ಮತ್ತು ಕಾನೂನು ಹಾಗೂ ಮಾನವ ಹಕ್ಕುಗಳ ಅಂಶಗಳನ್ನು ಪರಿಗಣಿಸಿದ ಬಳಿಕ ಈ ನಿರ್ಬಂಧ ವಿಧಿಸಲಾಗಿದೆ ಎಂದು ಅದು ಹೇಳಿದೆ.
ಮತ್ತೊಬ್ಬ ರಾಜಕೀಯ ವ್ಯಂಗ್ಯಚಿತ್ರಕಾರ ಮಂಜುಲ್ ಅವರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಒಂದು ವ್ಯಂಗ್ಯಚಿತ್ರಕ್ಕೂ ಭಾರತದಲ್ಲಿ ಇನ್‌ಸ್ಟಾಗ್ರಾಮ್ ಪ್ರವೇಶ ನಿರ್ಬಂಧಿಸಿದೆ. 'ಭಾರತ ಸರಕಾರ ಅಥವಾ ಕಾನೂನು ಜಾರಿ ಸಂಸ್ಥೆಗಳಿಂದ ಬಂದ ಸೂಚನೆಯ ಮೇರೆಗೆ' ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಜುಲ್ ತಿಳಿಸಿದ್ದಾರೆ.
ಸತೀಶ್ ಆಚಾರ್ಯ ಅವರ ಖಾತೆಯ ನಿರ್ಬಂಧವು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ನಡೆದಿದೆ. ಈ ನಿಯಮಗಳ ಪ್ರಕಾರ, ಸರಕಾರ ಅಥವಾ ನ್ಯಾಯಾಲಯದಿಂದ ನಿರ್ದೇಶನ ಬಂದ ಮೂರು ಗಂಟೆಗಳ ಒಳಗೆ ಸಾಮಾಜಿಕ ಜಾಲತಾಣ ವೇದಿಕೆಗಳು 'ಕಾನೂನುಬಾಹಿರ ವಿಷಯ'ವನ್ನು ತೆಗೆದುಹಾಕಬೇಕು.
ಸತೀಶ್ ಆಚಾರ್ಯ ಅವರ ಇತ್ತೀಚಿನ ವ್ಯಂಗ್ಯಚಿತ್ರಗಳಲ್ಲಿ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಸೆಪ್ಟೆಂಬರ್ 23ರಂದು ಪ್ರಕಟಿಸಿದ ತನಿಖಾ ವರದಿಯನ್ನು ಆಧರಿಸಿದ ಕೃತಿಗಳೂ ಇವೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚುನಾವಣಾ ಆಯೋಗ ಕೈಗೊಂಡ ನಿರ್ಧಾರಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ 14 ಬಾರಿ ಔಪಚಾರಿಕ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ಬಾರದೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದರು. ಈ ವಿಷಯವನ್ನು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿತ್ತು.
ತಮ್ಮ ಕೆಲವು ಪೋಸ್ಟ್ ಗಳನ್ನು ತೆಗೆದುಹಾಕುವ ಮೊದಲು ಮೆಟಾದಿಂದ ಯಾವುದೇ ಸೂಚನೆ ಬಂದಿರಲಿಲ್ಲ ಎಂದು ಆಚಾರ್ಯ 'scroll.in'ಗೆ ತಿಳಿಸಿದ್ದಾರೆ. ಬಳಿಕ ಭಾರತದಲ್ಲಿ ತಮ್ಮ ಪ್ರೊಫೈಲ್ ಲಭ್ಯವಿರುವುದಿಲ್ಲ ಎಂಬ ಅಧಿಸೂಚನೆ ಬಂದಿತು ಎಂದಿದ್ದಾರೆ.
'ಈ ಆಡಳಿತವು ಅತ್ಯಂತ ಶಕ್ತಿಶಾಲಿ ಮತ್ತು ನಿರ್ಭೀತ ಸರಕಾರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತದೆ. ಆದರೆ ಪ್ರತಿಯೊಂದು ಟೀಕೆಯೂ ಈ ಸರಕಾರವನ್ನು ಭಯಭೀತಗೊಳಿಸುತ್ತದೆ ಮತ್ತು ಹೇಡಿತನದ ಕ್ರಮಗಳನ್ನು ಕೈಗೊಳ್ಳುವಂತೆ ಮಾಡುತ್ತದೆ' ಎಂದು ಸತೀಶ್ ಆಚಾರ್ಯ ಹೇಳಿದ್ದಾರೆ.
ಸೋಮವಾರ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಅವರು, 'ವ್ಯಂಗ್ಯಚಿತ್ರಗಳಿಗೆ ಇಷ್ಟೊಂದು ಹೆದರುವ ಸರಕಾರವನ್ನು' ತಾನು ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.

