ನವದೆಹಲಿ: ದೇಶಾದ್ಯಂತದ ಶಾಲೆಗಳು ಮತ್ತು ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಬೆದರಿಸುವಿಕೆ ಮತ್ತು ರ‍್ಯಾಗಿಂಗ್ ತಡೆಗಟ್ಟಲು ಕೇಂದ್ರ ಕಾನೂನು ಹಾಗೂ ಏಕರೂಪದ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕೆಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ತೀರ್ಪು ನೀಡಲಾಗಿದ್ದು, ಆ ನಿರ್ದೇಶನಗಳ ಜಾರಿಗಾಗಿ ಮತ್ತೆ ಹೊಸ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಆದಾಗ್ಯೂ, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ನ್ಯಾಯಾಲಯವು ಅನುಮತಿ ನೀಡಿತು.
ಯಾದವಿ ಆದಿತ್ಯ ರಸಿವಾಸಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠವು ಈ ಆದೇಶವನ್ನು ಹೊರಡಿಸಿದೆ. ಈ ಅರ್ಜಿಯಲ್ಲಿ ಕೇಂದ್ರ ಸರಕಾರ, ಎಲ್ಲರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಂಡಳಿಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿತ್ತು.
ಶಾಲೆಗಳು ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ರ‍್ಯಾಗಿಂಗ್ ಹಾಗೂ ಕಿರುಕುಳದ ಹಾವಳಿಯನ್ನು ತಡೆಯಲು ಕೇಂದ್ರ ಸಚಿವಾಲಯಗಳು ಸೂಕ್ತ ಕಾನೂನನ್ನು ರೂಪಿಸಿ ಜಾರಿಗೆ ತರುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಜೊತೆಗೆ, ರ‍್ಯಾಗಿಂಗ್‌ಗೆ ಸಂಬಂಧಿಸಿದ ದೂರುಗಳನ್ನು ಪರಿಣಾಮಕಾರಿಯಾಗಿ ಆಲಿಸಿ ವಿಲೇವಾರಿ ಮಾಡಲು ಎಲ್ಲ ಶಾಲೆಗಳು ಕಡ್ಡಾಯವಾಗಿ ಪಾಲಿಸಬೇಕಾದ ಪೂರಕ ಮಾರ್ಗಸೂಚಿಗಳನ್ನು ರೂಪಿಸಬೇಕೆಂದೂ ಒತ್ತಾಯಿಸಲಾಗಿತ್ತು.
ರ‍್ಯಾಗಿಂಗ್ ಮತ್ತು ಕಿರುಕುಳದ ದುಷ್ಪರಿಣಾಮಗಳನ್ನು ವಿಷಯವನ್ನಾಗಿ ಎಲ್ಲ ಕೇಂದ್ರ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಸೇರಿಸಲು ನಿರ್ದೇಶನ ನೀಡಬೇಕೆಂದೂ ಅರ್ಜಿದಾರರು ಕೋರಿದ್ದರು.

