ಸಾಗರ : ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ವಿಷಮಿಶ್ರಿತ ಮದ್ಯ ಸೇವಿಸಿ ಒಂಬತ್ತು ಜನರು ಮೃತಪಟ್ಟಿದ್ದಾರೆ. ಹಲವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಬಂಡಾ ತಹಸಿಲ್ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ಈ ದುರಂತ ಸಂಭವಿಸಿದೆ.
ಸ್ಥಳೀಯರು ನಕಲಿ ಮದ್ಯವನ್ನು ಸೇವಿಸಿದ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ʼವಿಷಮಿಶ್ರಿತ ಮದ್ಯ ಸೇವನೆಯಿಂದಲೇ ಈ ಸಾವುಗಳು ಸಂಭವಿಸಿವೆ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ಗ್ರಾಮಗಳಲ್ಲಿ ಮನೆ-ಮನೆ ಆರೋಗ್ಯ ತಪಾಸಣೆ ಮತ್ತು ಸ್ಕ್ರೀನಿಂಗ್ ಕಾರ್ಯವನ್ನು ತಕ್ಷಣವೇ ಆರಂಭಿಸಲಾಗಿದೆʼ ಎಂದು ಸಾಗರ ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ತಿಳಿಸಿದ್ದಾರೆ.

