ನವದೆಹಲಿ (ಪಿಟಿಐ): ರಸ್ತೆ ಸುರಕ್ಷತೆಗೆ ಕಂಟಕವಾಗಿರುವ ಹೆದ್ದಾರಿ ಅತಿಕ್ರಮಣವನ್ನು ತೀವ್ರವಾಗಿ ಖಂಡಿಸಿರುವ ಸುಪ್ರೀಂ ಕೋರ್ಟ್, ವ್ಯವಸ್ಥಿತ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆ ಮತ್ತು ಇದನ್ನು ನಿರ್ವಹಿಸಲು ಟೋಲ್ ಪ್ಲಾಜಾಗಳಲ್ಲಿ ಮೇಲ್ವಿಚಾರಣಾ ಕೊಠಡಿಗಳನ್ನು ಏಕೆ ಸ್ಥಾಪಿಸಬಾರದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್‌ಎಚ್‌ಎಐ) ಪ್ರಶ್ನಿಸಿದೆ.
ರಾಜಸ್ಥಾನದ ಫಲೋದಿಯಲ್ಲಿ ಇತ್ತೀಚೆಗೆ 15 ಜೀವಗಳನ್ನು ಬಲಿ ಪಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಗುರುವಾರ ನಡೆಸಿತು.
ಎನ್‌ಎಚ್‌ಎಐ ಪರವಾಗಿ ಹಾಜರಾದ ವಕೀಲರು, 'ಹೆದ್ದಾರಿಗಳಲ್ಲಿ ಅನಧಿಕೃತ ವಾಹನ ನಿಲುಗಡೆಗಳನ್ನು ಪರಿಶೀಲಿಸಲು ನಿಯಮಿತ ತಪಾಸಣೆ ಮತ್ತು ಗಸ್ತು ತಿರುಗುವಿಕೆಗಾಗಿ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ' ಎಂದು ಪೀಠದ ಗಮನಕ್ಕೆ ತಂದರು.
ಈ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಪೀಠವು, 'ಹೆದ್ದಾರಿಯಲ್ಲಿ ನಿಲ್ಲುವ ವಾಹನಗಳ ಸಮಸ್ಯೆಯಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಡೆಯಲು ವ್ಯವಸ್ಥಿತ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆ ಹೊಂದುವ ಬಗ್ಗೆ ನೀವು ಏಕೆ ಯೋಚಿಸಬಾರದು' ಎಂದು ಪ್ರಶ್ನಿಸಿತು.
'ಹೆದ್ದಾರಿಗಳಲ್ಲಿ ವಾಹನಗಳನ್ನು ಅಕ್ರಮವಾಗಿ ನಿಲುಗಡೆ ಮಾಡುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ' ಎಂದು ಅಮಿಕಸ್ ಕ್ಯೂರಿ ಎಎನ್‌ಎಸ್ ನಾಡಕರ್ಣಿ ಅವರು ಕೂಡ ಪೀಠದ ಗಮನಕ್ಕೆ ತಂದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ವಲಯ, ಬ್ಲ್ಯಾಕ್‌ಸ್ಪಾಟ್‌ಗಳನ್ನುಗುರುತಿಸಿ ಇವುಗಳ ಸಮಗ್ರ ಪಟ್ಟಿ ಪ್ರಕಟಿಸುವಂತೆಯೂ ನ್ಯಾಯಪೀಠ ಎನ್‌ಎಚ್‌ಎಐಗೆ ಸೂಚಿಸಿತು.

