ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹೊಡೆದುರುಳಿಸಲಾಗಿದೆ.
ಪುಲ್ವಾಮಾ ಜಿಲ್ಲೆಯ ಪಖರ್‌ಪೋರಾದಿಂದ ಬುಡ್ಗಾಮ್‌ನ ಯೂಸ್‌ಮಾರ್ಗ್ ಕಡೆಗೆ ಶಂಕಿತ ಉಗ್ರರ ಗುಂಪೊಂದು ಚಲಿಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಗುಪ್ತಚರ ಮಾಹಿತಿ ಆಧರಿಸಿ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಪಡೆಗಳು ಬುಡ್ಗಾಮ್‌ನ ಅಶ್‌ದಾರ್ ಗಲ್ಲಿಯಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿವೆ' ಎಂದು ಶ್ರೀನಗರದ ಚಿನಾರ್ ಕೋರ್ ತಿಳಿಸಿದೆ.
'ಉಗ್ರರ ಗುಂಡಿನ ದಾಳಿಗೆ ಪ್ರತಿದಾಳಿ ನಡೆಸಿದ ಯೋಧರು ಒಬ್ಬನನ್ನು ಹೊಡೆದುರುಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಎಕೆ-47 ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಶಂಕೆ ಇದ್ದು, ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ ಎಂದು ತಿಳಿದುಬಂದಿದೆ.
ಕಣಿವೆ ರಾಜ್ಯದಲ್ಲಿ ಹಲವು ತಿಂಗಳ ಬಳಿಕ ಎನ್‌ಕೌಂಟರ್ ನಡೆಸಲಾಗಿದೆ.

