ಮುಂಬೈ: 'ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಸಮಾಜದಲ್ಲಿ ಇಂದಿಗೂ ಕೆಲ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕುವಲ್ಲಿ ವಿಫಲವಾಗಿದ್ದೇವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ' ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಶೌಚಗುಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮೃತಪಟ್ಟ ನೈರ್ಮಲ್ಯ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವ ಹೊಣೆಯನ್ನು ಖಾಸಗಿ ಸಂಸ್ಥೆಗಳ ಮೇಲೆ ಹೊರಿಸಿದ್ದ ಮಹಾರಾಷ್ಟ್ರ ಸರ್ಕಾರದ ನೀತಿಯನ್ನು ರದ್ದುಗೊಳಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರ ವಿಭಾಗೀಯ ಪೀಠವು, ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ತಕ್ಷಣವೇ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
'ಚಂದ್ರನ ಇನ್ನೊಂದು ಬದಿಯನ್ನು ತಲುಪಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ನಮ್ಮ ಕಣ್ಣೆದುರೇ ಇರುವ ಕಠೋರ ಸತ್ಯವೆಂದರೆ, ದೇಶದಲ್ಲಿ ಇಂದಿಗೂ ಜಾತಿ ಪದ್ಧತಿ ಎಂಬ ಸಾಮಾಜಿಕ ಪಿಡುಗು ಜೀವಂತವಾಗಿದೆ. ಇದು ಮಾನವ ಘನತೆಗೆ ಕುಂದುಂಟು ಮಾಡುವ ಕೆಲಸಗಳನ್ನು ಮಾಡುವಂತೆ ಕೆಲವರ ಮೇಲೆ ಒತ್ತಡ ಹಾಕುತ್ತಿದೆ' ಎಂದು ನ್ಯಾಯಾಲಯ ವಿಷಾದಿಸಿದೆ.
'ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಕಳೆದಿದ್ದರೂ, ಶತಮಾನಗಳಿಂದ ದೇಶವನ್ನು ಕಾಡುತ್ತಿರುವ ಈ ಸಾಮಾಜಿಕ ಪಿಡುಗಿನಿಂದ ಇನ್ನೂ ಸಂಪೂರ್ಣ ಮುಕ್ತಿ ದೊರೆತಿಲ್ಲ' ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
'ಮಲ ಹೊರುವ ಪದ್ಧತಿಯೂ ಇಂತಹದ್ದೇ ಒಂದು ಅಮಾನವೀಯ ಆಚರಣೆ. ಸರ್ವೋಚ್ಚ ನ್ಯಾಯಾಲಯದ ಹಲವು ತೀರ್ಪುಗಳು ಹಾಗೂ ಶಾಸನಬದ್ಧ ನಿಷೇಧಗಳ ಹೊರತಾಗಿಯೂ, ನಿರ್ದಿಷ್ಟ ಸಮುದಾಯದ ಜನರನ್ನು ತಲೆತಲಾಂತರಗಳಿಂದ ಈ ಅಮಾನವೀಯ ಪದ್ಧತಿಯಲ್ಲಿ ತೊಡಗಿಸಲಾಗುತ್ತಿದೆ' ಎಂದು ನ್ಯಾಯಾಲಯ ಹೇಳಿದೆ.
ನೈರ್ಮಲ್ಯ ಕಾರ್ಮಿಕರ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವುದು ಸರ್ಕಾರದ ಹೊಣೆಯಾಗಿದೆ ಎಂದೂ ಪೀಠ ಒತ್ತಿಹೇಳಿದೆ.
ಶೌಚಗುಂಡಿ ಸ್ವಚ್ಛಗೊಳಿಸುವ ವೇಳೆ ಕಾರ್ಮಿಕರು ಮೃತಪಟ್ಟ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಪರಿಹಾರವನ್ನು ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ನಂತರ ಆ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ಖಾಸಗಿ ಸಂಸ್ಥೆಗಳಿಂದ ವಸೂಲಿ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.

