HEALTH TIPS

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ತುರ್ಕಿಯೆ ಅಧ್ಯಕ್ಷ ಎರ್ದೊಗಾನ್

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಮಾಡಿದ ಭಾಷಣದಲ್ಲಿ ತುರ್ಕಿಯೆ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಅವರು ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ ಎಂದು Hindustan Times ವರದಿ ಮಾಡಿದೆ. ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಎರ್ದೊಗಾನ್ ಹೇಳಿರುವುದಾಗಿ ವರದಿ ತಿಳಿಸಿದೆ.


ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಎರ್ದೊಗಾನ್ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುತ್ತಿರುವುದು ಇದೇ ಮೊದಲೇನಲ್ಲ .

"ದಕ್ಷಿಣ ಏಷ್ಯಾದಲ್ಲಿ ಕಾಶ್ಮೀರ ವಿವಾದವೂ ಸೇರಿದಂತೆ ಎಲ್ಲಾ ಭಿನ್ನಾಭಿಪ್ರಾಯಗಳನ್ನು ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ಸಂಬಂಧಿತ ನಿರ್ಣಯಗಳ ಚೌಕಟ್ಟಿನೊಳಗೆ ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳುವುದು ಮುಖ್ಯವಾಗಿದೆ," ಎಂದು ಎರ್ದೊಗಾನ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ಈ ಹಿಂದಿನ ಅಧಿವೇಶನದಲ್ಲಿಯೂ ಹೇಳಿಕೆ ನೀಡಿದ್ದ ಎರ್ದೊಗಾನ್, ಕಳೆದ ವರ್ಷದ ಸೆಪ್ಟೆಂಬರ್ ನಲ್ಲೂ ಅವರು UNGA ಅಧಿವೇಶನದಲ್ಲಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದ್ದರು.

"ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದ ಮೇಲೆ, ನಮ್ಮ ಕಾಶ್ಮೀರಿ ಸಹೋದರ-ಸಹೋದರಿಯರ ಹಿತದೃಷ್ಟಿಯಿಂದ, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಾಗುತ್ತದೆ ಎಂದು ನಾವು ಆಶಿಸುತ್ತೇವೆ," ಎಂದು ಅವರು ಈ ಹಿಂದೆ ಹೇಳಿದ್ದರು.

ತುರ್ಕಿಯೆ ಅಧ್ಯಕ್ಷರ ಈ ಹೇಳಿಕೆಗೆ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿತ್ತು. ಕಾಶ್ಮೀರ ವಿಚಾರ ಸಂಪೂರ್ಣವಾಗಿ ದ್ವಿಪಕ್ಷೀಯ ವಿಷಯವಾಗಿದ್ದು, ಇದರಲ್ಲಿ ಯಾವುದೇ ಹೊರಗಿನ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.

"ಕಾಶ್ಮೀರ ವಿಷಯದಲ್ಲಿ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಮಧ್ಯಸ್ಥಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ, ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯಗಳಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶದ ಅಗತ್ಯವಿಲ್ಲ," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.

ಆದರೆ, 2024ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಎರ್ದೊಗಾನ್ ಜಮ್ಮು ಮತ್ತು ಕಾಶ್ಮೀರದ ಹೆಸರನ್ನು ಪ್ರಸ್ತಾಪಿಸಿರಲಿಲ್ಲ.

ಪಾಕಿಸ್ತಾನ ಭೇಟಿಯಲ್ಲಿಯೂ ಅದೇ ಹೇಳಿಕೆ

ಫೆಬ್ರವರಿ 2025ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ತುರ್ಕಿಯೆ ಅಧ್ಯಕ್ಷರು ಕಾಶ್ಮೀರ ವಿಚಾರದ ಬಗ್ಗೆ ಮಾತನಾಡಿದ್ದರು.

2025ರ ಫೆಬ್ರವರಿ 13ರಂದು ಇಸ್ಲಾಮಾಬಾದ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎರ್ದೊಗಾನ್, ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಯ ಮೂಲಕವೇ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗಬೇಕು ಎಂದು ಹೇಳಿದ್ದರು.

"ಕಾಶ್ಮೀರಿ ಜನರ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು, ವಿಶ್ವಸಂಸ್ಥೆಯ ನಿರ್ಣಯದ ಅನ್ವಯ ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬೇಕು. ಹಿಂದಿನಂತೆಯೇ ನಮ್ಮ ದೇಶ ಮತ್ತು ನಮ್ಮ ರಾಷ್ಟ್ರ ಇಂದು ಕೂಡ ಕಾಶ್ಮೀರಿ ಸಹೋದರರೊಂದಿಗೆ ನಿಲ್ಲುತ್ತದೆ," ಎಂದು ಅವರು ಹೇಳಿದ್ದರು.

ವಿಶ್ವಸಂಸ್ಥೆಯ ನಿರ್ಣಯದಂತೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಬೇಕು ಎಂಬ ಎರ್ದೊಗಾನ್ ಅವರ ಕರೆಯನ್ನು ಭಾರತ ತಿರಸ್ಕರಿಸಿತ್ತು. ಅಲ್ಲದೆ, ಈ ಹೇಳಿಕೆ ಅನಗತ್ಯ ಮತ್ತು ಸ್ವೀಕಾರಾರ್ಹವಲ್ಲ ಎಂದು ತಿಳಿಸಿ ತುರ್ಕಿಯೆ ರಾಯಭಾರಿಗೆ ಆಕ್ಷೇಪಣೆ ದಾಖಲಿಸಿತ್ತು.

"ಭಾರತದ ಆಂತರಿಕ ವಿಚಾರಗಳ ಕುರಿತ ಇಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತೇವೆ. ದಿಲ್ಲಿಯಲ್ಲಿರುವ ತುರ್ಕಿಯೆ ರಾಯಭಾರಿಗೆ ನಾವು ತೀವ್ರ ಪ್ರತಿಭಟನೆಯನ್ನು ದಾಖಲಿಸಿದ್ದೇವೆ. ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವದ ಕುರಿತು ಇಂತಹ ಅನಗತ್ಯ ಹೇಳಿಕೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಅದರ ಬಗ್ಗೆ ಮಾತನಾಡಲು ಯಾವುದೇ ದೇಶಕ್ಕೆ ಹಕ್ಕಿಲ್ಲ," ಎಂದು ಜೈಸ್ವಾಲ್ ಅಂದು ಸ್ಪಷ್ಟಪಡಿಸಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries