HEALTH TIPS

ಯುದ್ಧ ವಿರಾಮಕ್ಕೆ ಇರಾನ್ 'ಬೆಲೆ' ಹೆಚ್ಚಳ: ಅಮೆರಿಕಕ್ಕೆ ಖಡಕ್ ಎಚ್ಚರಿಕೆ

ಟೆಹರಾನ್‌: ಅಮೆರಿಕ ಮತ್ತು ಇರಾನ್‌ ನಡುವಿನ ಶಾಂತಿ ಒಪ್ಪಂದ ಮುರಿದುಬಿದ್ದ ಬೆನ್ನಲ್ಲೇ, ಯುದ್ಧವನ್ನು ಅಂತ್ಯಗೊಳಿಸಲು ಇರಾನ್ ತನ್ನ ಷರತ್ತುಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. 


ಇರಾನ್‌ ಬೇಡಿಕೆಗಳ ಒಪ್ಪುವುದನ್ನು ಬಿಟ್ಟು ಅಮೆರಿಕಗೆ ಬೇರೆ ಮಾರ್ಗವೇ ಇಲ್ಲ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ವಕ್ತಾರ ಹೊಸೈನ್ ಮೊಹೆಬಿ ಸ್ಪಷ್ಟಪಡಿಸಿದ್ದಾರೆ. 

ಹಿಂದಿನ ಶಾಂತಿ ಒಪ್ಪಂದವನ್ನು ಅಮೆರಿಕವೇ ಉಲ್ಲಂಘಿಸಿದೆ. ಹೀಗಾಗಿ ಶಾಂತಿ ಮಾತುಕತೆಗಾಗಿ ನಾವು ವಿಧಿಸುವ ದಂಡ ಅಥವಾ ಬೆಲೆಯನ್ನು ಹೆಚ್ಚಿಸಿದ್ದೇವೆ ಎಂದು 'ಎಎಫ್‌ಪಿ' ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೊಹೆಬಿ ಹೇಳಿದ್ದಾರೆ.

'ಅಮೆರಿಕ ಒಪ್ಪಂದವನ್ನು ಮುರಿದಿರುವುದರಿಂದ ನಾವು ನಮ್ಮ ಷರತ್ತುಗಳನ್ನು ಬಿಗಿಗೊಳಿಸಿದ್ದೇವೆ. ಇದೇ ಧೋರಣೆಯನ್ನು ಮುಂದುವರಿಸಿದರೆ ಅಮೆರಿಕ ತನ್ನ ಪರಿಸ್ಥಿತಿಯನ್ನು ತಾನೇ ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಿಕೊಳ್ಳಲಿದೆ' ಎಂದು ಅವರು ಎಚ್ಚರಿಸಿದರು. ನಾವು ಅವರ ಆಟದ ವಸ್ತುವಲ್ಲ. ತಮಗೆ ಬೇಕೆನಿಸಿದಾಗಲೆಲ್ಲಾ ಅವರು ಮಾಡಿಕೊಂಡ ಒಪ್ಪಂದವನ್ನು ಏಕಪಕ್ಷೀಯವಾಗಿ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಹೊಸ ಬೇಡಿಕೆಗಳು ಮುನ್ನೆಲೆಗೆ...

ಮೊಹೆಬಿ ಅವರ ಪ್ರಕಾರ, ಅಮೆರಿಕದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ 24 ಶತಕೋಟಿ ಡಾಲರ್ (₹ 22,9560 ಶತಕೋಟಿ) ಮೊತ್ತದ ಸಂಪೂರ್ಣ ಆಸ್ತಿಯನ್ನು ಮಾತುಕತೆಯ ಹಂತಗಳಲ್ಲಿ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು ಎಂದು ಇರಾನ್ ಈಗ ಪಟ್ಟು ಹಿಡಿದಿದೆ.

ಅಷ್ಟೇ ಅಲ್ಲದೆ, ಜೂನ್ ಒಪ್ಪಂದದಲ್ಲಿ ಇಲ್ಲದ 'ಯೆಮೆನ್' ವಿಷಯವನ್ನೂ ಇರಾನ್ ಈಗ ಸೇರಿಸಿದೆ. ಯೆಮೆನ್ ಮೇಲಿನ ದಿಗ್ಬಂಧನ ತೆರವುಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಇರಾನ್ ಬೆಂಬಲಿತ ಹೌಥಿ ಪಡೆಗಳು ಇರಾನ್‌ ನಿರ್ದೇಶನದಂತೆ ಕೆಲಸ ಮಾಡುತ್ತಿವೆ ಎಂಬ ಆರೋಪವನ್ನು ಮೊಹೆಬಿ ತಳ್ಳಿಹಾಕಿದರು. ಹೌಥಿಗಳು ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ. ಯಾವುದೇ ವಿಷಯಕ್ಕೂ ಅವರು ನಮ್ಮೊಂದಿಗೆ ಸಮಲೋಚನೆ ನಡೆಸುವ ಅಗತ್ಯವಿಲ್ಲ ಎಂದರು.

ವಿಜಯ ನಮ್ಮದೇ ಎಂದ ಇರಾನ್...

ಪೂರ್ವ ಏಷ್ಯಾದ ಈ ಯುದ್ಧ ಒಂದು ಹಂತಕ್ಕೆ ಶಮನಗೊಂಡಿದ್ದರೂ, ವಿಶೇಷವಾಗಿ ಹೊರ್ಮುಜ್‌ ಜಲಸಂಧಿಯ ಸುತ್ತಮುತ್ತ ನಡೆಯುತ್ತಿರುವ ದಾಳಿಗಳು ಶಾಂತಿ ಯತ್ನಗಳಿಗೆ ಅಡ್ಡಿಯಾಗಿವೆ.

ಪರ್ಷಿಯನ್ ಕೊಲ್ಲಿಯಿಂದ ಜಾಗತಿಕ ಇಂಧನ ಪೂರೈಕೆಗೆ ಹೊರ್ಮುಜ್‌ ಜಲಸಂಧಿ ಅತ್ಯಂತ ಪ್ರಮುಖ ಮಾರ್ಗ. ಇದು ಕೇವಲ ತೈಲ ಸಾಗಣೆಗೆ ಮಾತ್ರ ಸೀಮಿತವಾಗಿಲ್ಲ, ರಸಗೊಬ್ಬರ ಸೇರಿದಂತೆ ಇತರ ಅಗತ್ಯ ವಸ್ತುಗಳ ಪೂರೈಕೆಗೂ ಅತ್ಯಂತ ಪ್ರಮುಖವಾಗಿದೆ ಎಂದು ಮೊಹೆಬಿ ಹೇಳಿದರು.

ಈ ಸಂಘರ್ಷದಲ್ಲಿ ಇರಾನ್ ಜಯಗಳಿಸಿದೆ ಎಂದು ಪ್ರತಿಪಾದಿಸಿದ ಅವರು, ನಾವು ಈ ಯುದ್ಧವನ್ನು ಗೆದ್ದಿದ್ದೇವೆ ಎಂದು ಬಲವಾಗಿ ನಂಬುತ್ತೇವೆ. ಪ್ರಸ್ತುತ ಈ ವಿಜಯವನ್ನು ಸಂಪೂರ್ಣ ಪ್ರತಿರೋಧಕ ಶಕ್ತಿಯಾಗಿ ಬಲಪಡಿಸುತ್ತಿದ್ದೇವೆ ಎಂದರು.

ಇನ್ನೊಂದೆಡೆ, ಇರಾನ್‌ ದೇಶವನ್ನು ಆರ್ಥಿಕವಾಗಿ ಉಸಿರುಗಟ್ಟಿಸುವ ತಂತ್ರವನ್ನು ಅಮೆರಿಕ ತೀವ್ರಗೊಳಿಸಿದೆ. ಇರಾನ್‌ನೊಂದಿಗೆ ನಂಟು ಹೊಂದಿರುವ ವಿದೇಶಿ ಬ್ಯಾಂಕುಗಳನ್ನು ಗುರಿಯಾಗಿಸಿ ಕಠಿಣ ನಿರ್ಬಂಧಗಳನ್ನು ಹೇರಿದೆ.

ಆರ್ಥಿಕ ಒತ್ತಡದಿಂದ ಇರಾನ್‌ಗೆ ಹಾನಿಯಾಗುತ್ತಿರುವುದನ್ನು ಒಪ್ಪಿಕೊಂಡ ಮೊಹೆಬಿ, ಇದರಿಂದ ಅಮೆರಿಕದ ಉದ್ದೇಶಗಳು ಈಡೇರುವುದಿಲ್ಲ ಎಂದರು. ಆರ್ಥಿಕ ದಿಗ್ಬಂಧನದಿಂದ ನಮಗೆ ನಷ್ಟವಾಗುತ್ತಿರುವುದು ನಿಜ, ನಾವಂತೂ ಖಂಡಿತವಾಗಿಯೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಆದರೆ ಅಮೆರಿಕ ತನ್ನ ಆಕಾಂಕ್ಷೆಗಳನ್ನು ಈ ಮಾರ್ಗದಲ್ಲಿ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಅಮೆರಿಕ ಮತ್ತೆ ಹೊಸ ದಾಳಿಗಳನ್ನು ನಡೆಸಿದರೆ ಇರಾನ್‌ನಿಂದ ಮತ್ತಷ್ಟು ಪ್ರತಿದಾಳಿ ನಡೆಯಲಿವೆ ಎಂದರು. ಸಂಘರ್ಷವನ್ನು ವಿಸ್ತರಿಸಲು ಇರಾನ್‌ ಬಯಸುವುದಿಲ್ಲ ಎಂದೂ ಸ್ಪಷ್ಟಪಡಿಸಿದರು. ಅವರು ಮತ್ತೆ ಉದ್ಧಟತನ ತೋರಿ ದಾಳಿ ಮಾಡಿದರೆ ನಮ್ಮಿಂದ ಪ್ರತಿರೋಧ ಮತ್ತಷ್ಟು ತೀವ್ರಗೊಳ್ಳಲಿದೆ, ಈ ಬಾರಿ ನಾವು ಪ್ರತ್ಯುತ್ತರ ನೀಡುವುದಷ್ಟೇ ಅಲ್ಲ, ಆಕ್ರಮಣಕಾರಿ ಶೈಲಿಯನ್ನು ಅಳವಡಿಸಿಕೊಳ್ಳುತ್ತೇವೆ. ಅಮೆರಿಕ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡಲಿದ್ದು ಹಿಂದೆಂದೂ ಕಾಣದ ಭಾರಿ ಮುಖಭಂಗ ಅನುಭವಿಸಲಿದೆ ಎಂದು ಎಚ್ಚರಿಸಿದರು.

ರೆವಲ್ಯೂಷನರಿ ಗಾರ್ಡ್ಸ್ ಜೊತೆ ಸಂಪರ್ಕ ಸಾಧಿಸಲು ಅಮೆರಿಕ ಪ್ರಯತ್ನಿಸಿತು. ಆದರೆ ನಾವು ಅವರ ಪ್ರಸ್ತಾವನೆಗಳನ್ನು ತಿರಸ್ಕರಿಸಿದೆವು ಎಂದು ಮೊಹೆಬಿ ಬಹಿರಂಗಪಡಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries