ನವದೆಹಲಿ: 'ಕಾನೂನು ವಿದ್ಯಾರ್ಥಿಗಳ ವರ್ತನೆ ಹೇಗೆ ಇರಬೇಕು ಎಂದು ನಿರ್ಧರಿಸುವುದಕ್ಕೆ ಅಥವಾ ಅವರನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿ ಭಾರತೀಯ ವಕೀಲರ ಸಂಘವು (ಬಿಸಿಐ) ಶಾಸನಬದ್ಧ ಅಧಿಕಾರ ಹೊಂದಿಲ್ಲ' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
'ತಾವು ಹೊಂದಿರುವ ನಿಯಮಗಳ ಅನುಸಾರವಾಗಿ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತವೆ' ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ.ಮೋಹನಾ ಅವರು ಇದ್ದ ನ್ಯಾಯಪೀಠ ಹೇಳಿದೆ.
'ವಿದ್ಯಾರ್ಥಿಗಳು ವಕೀಲ ವೃತ್ತಿಯನ್ನು ಕೈಗೊಂಡ ಬಳಿಕ ಅವರು ಬಿಸಿಐನ ನಿಯಮಾವಳಿಗಳ ವ್ಯಾಪ್ತಿಗೆ ಒಳಪಡುತ್ತಾರೆ. ಅದಕ್ಕೆ ಮುನ್ನವೇ ಅವರ ವಿರುದ್ಧ ಬಿಸಿಐ ತನ್ನ ಅಧಿಕಾರ ಚಲಾಯಿಸುವಂತಿಲ್ಲ' ಎಂದೂ ಪೀಠವು ಸ್ಪಷ್ಟಪಡಿಸಿದೆ.
ಹೈದರಾಬಾದ್‌ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆಯಂಡ್ ರಿಸರ್ಚ್ ವಿಶ್ವವಿದ್ಯಾಲಯದ (ಎನ್‌ಎಎಲ್‌ಎಸ್‌ಎಆರ್) ಘಟಿಕೋತ್ಸವದಲ್ಲಿ ಸಿಜೆಐ ಸೂರ್ಯಕಾಂತ್ ಅವರು ಪಾಲ್ಗೊಳ್ಳುವುದನ್ನು ವಿರೋಧಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಅಭಿಯಾನ ನಡೆಸಿದ್ದರು. ಈ ಕಾರಣಕ್ಕೆ, ಎಲ್ಲ ರಾಜ್ಯಗಳ ವಕೀಲರ ಸಂಘಗಳಿಗೆ ಸುತ್ತೋಲೆಯೊಂದನ್ನು ಕಳುಹಿಸಿದ್ದ ಬಿಸಿಐ, ಈ ವಿ.ವಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳನ್ನು ವಕೀಲರಾಗಿ ನೋಂದಣಿ ಮಾಡಿಸಿಕೊಳ್ಳದಂತೆ ಸೂಚಿಸಿತ್ತು. ಬಿಸಿಐನ ಈ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

