ಪೆರ್ಲ: ಪೂವನಡ್ಕ ರಸ್ತೆಯಲ್ಲಿ ಬಜಕೂಡ್ಲು ಶ್ರೀದುರ್ಗಾಪರಮೇಶ್ವರೀ ಭಜನಾಮಂದಿರ ಸನಿಹ ಮರದ ರೆಂಬೆ ವಿದ್ಯುತ್ ತಂತಿಗೆ ಬಿದ್ದು, ಎರಡು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ಈ ಸಂದರ್ಭ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಒಂದು ಆಟೋರಿಕ್ಷಾ ಹಾಗೂ ಸ್ಕೂಟಿ ಕೂದಲೆಳೆಯ ಅಂತರದಿಂದ ಪಾರಾಗಿದ್ದು, ಭಾರೀ ದುರಂತ ತಪ್ಪಿದೆ.
ರಸ್ತೆ ಅಂಚಿಗೆ ಬೃಹದಾಗಿ ಬೆಳೆದು ನಿಂತಿದ್ದ ಮರದ ರೆಂಬೆ ಮುರಿದು ತಂತಿಗೆ ಬಿದ್ದಿತ್ತು. ತಕ್ಷಣ ಕೆಎಸ್‍ಇಬಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಿದ್ಯುತ್ ವಿಚ್ಛೇದಿಸಿದ್ದಾರೆ.
ವಿದ್ಯುತ್ ತಂತಿ ಹಾದುಹೋಗುತ್ತಿರುವ ಪ್ರದೇಶದಲ್ಲಿರುವ ಈ ಮರವನ್ನು ಕಡಿದುರುಳಿಸುವಲ್ಲಿ ಕೆಎಸ್‍ಇಬಿ ನಿರ್ಲಕ್ಷ್ಯ ವಹಿಸಿರುವುದರಿಂದ ಅಪಾಯ ಎದುರಿಸುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


