ನವದೆಹಲಿ (PTI): ಹಿಂದುತ್ವ ಇನ್‌ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಸತ್ ಮಾರ್ಗದ ಪೊಲೀಸ್ ಠಾಣೆ ಎದುರು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬೆಂಬಲಿಗರು ಶುಕ್ರವಾರ ಪ್ರತಿಭಟನೆ ನಡೆಸಿದರು.
72 ತಾಸುಗಳ ಒಳಗಾಗಿ ಭಾರದ್ವಾಜ್ ಅವರನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಸ್ಥಳದಿಂದ ನಿರ್ಗಮಿಸಿದರು.
ಸಿಜೆಪಿ ಪ್ರತಿಭಟನೆ ಬಳಿಕ, ಸ್ವತಂತ್ರ ಭಾರದ್ವಾಜ್ ಅವರನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದರು.
'ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ ನಿಶು ಆಜಾದ್ ತಂದೆ ಸಂಜಯ್ ಕುಮಾರ್ ಅವರ ತಲೆ ಒಡೆದಿರುವುದಾಗಿ ಭಾರದ್ವಾಜ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಸಂಬಂಧ ಕೊಲೆ ಯತ್ನ, ಕ್ರಿಮಿನಲ್ ಬೆದರಿಕೆ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು. ಆನ್‌ಲೈನ್‌ನಲ್ಲಿ ಕಿರುಕುಳ ಮತ್ತು ಹಲ್ಲೆಗೊಳಗಾದ ವ್ಯಕ್ತಿಯ ಪುತ್ರಿಯನ್ನು ಗುರಿಯಾಗಿಸಿ ಆಕ್ಷೇಪಾರ್ಹ ಚಿತ್ರವನ್ನು ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ' ಎಂದು ಪಕ್ಷದ ಪ್ರತಿನಿಧಿ ಯೊಬ್ಬರು ತಿಳಿಸಿದರು.
ಭಾರದ್ವಾಜ್ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಸಿಜೆಪಿ ಪ್ರತಿಭಟನೆ ನಡೆಸಿತ್ತು.
'ಇಂಥ ಗೂಂಡಾಗಳು ಶಿಕ್ಷೆ ಇಲ್ಲದೆ ಹೊರಹೋಗಬಾರದು' ಎಂದು ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ಹೇಳಿದರು.
'ದಾಳಿ ನಡೆಸಿಲ್ಲ, ಸ್ವಯಂರಕ್ಷಣೆಯಷ್ಟೆ'
'ವಾಸ್ತವವಾಗಿ ನಾನು ದಾಳಿ ನಡೆಸಿಲ್ಲ, ಸ್ವಯಂ ರಕ್ಷಣೆಯಷ್ಟೆ' ಎಂದು ಬಾರದ್ವಾಜ್ ಹೇಳಿದ್ದಾರೆ.
'10ರಿಂದ 15 ಜನರು ನನ್ನನ್ನು ಸುತ್ತುವರಿದಿದ್ದರು. ನಾನು ಸ್ವಯಂರಕ್ಷಣೆಗೆ ಮುಂದಾದಾಗ ಅವರ ತಲೆಗೆ ಪೆಟ್ಟಾಗಿದೆ. ಇದನ್ನು ಸಾಬೀತು ಮಾಡಲು ನನ್ನ ಬಳಿ ವಿಡಿಯೊ ಸಾಕ್ಷ್ಯವಿದೆ' ಎಂದು ಭಾರದ್ವಾಜ್ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

