ಚೆನ್ನೈ: ಸರ್ಕಾರಿ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಊಟದಲ್ಲಿ ಗೋಮಾಂಸದ ಖಾದ್ಯವನ್ನೂ ಸೇರ್ಪಡೆಗೊಳಿಸುವ ಮನವಿಯನ್ನು ಸರ್ಕಾರ ಪರಿಗಣಿಸಲಿದೆ ಎಂದು ತಮಿಳುನಾಡು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ನೀಡಿದ್ದ ಹೇಳಿಕೆ ಈಗ ವಿವಾದಕ್ಕೀಡಾಗಿದೆ.
ಸಾರ್ವಜನಿಕರ ಭಾವನೆಗೆ ಅರಸು ಧಕ್ಕೆ ತಂದಿದ್ದಾರೆ ಎಂದು ಪುಥಿಯ ತಮಿಳಿಗಂ ಪಕ್ಷದ ಅಧ್ಯಕ್ಷ ಕೆ. ಕೃಷ್ಣಸ್ವಾಮಿ ಆರೋಪಿಸಿದ್ದಾರೆ.
ಇಲ್ಲಿನ ಸಯ್ಯದ್‌ಪೇಟ್‌ನಲ್ಲಿರುವ ಎಂ.ಸಿ.ರಾಜಾ ಸಾಮಾಜಿಕ ನ್ಯಾಯ ವಸತಿನಿಲಯಕ್ಕೆ ಸೋಮವಾರ ಅರಸು ಭೇಟಿ ನೀಡಿದ್ದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ವಸತಿನಿಲಯದಲ್ಲಿರುವ ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳು, ಪ್ರಸಕ್ತ ನೀಡುತ್ತಿರುವ ಕೋಳಿಮಾಂಸ, ಕುರಿಮಾಂಸದ ಜತೆಗೆ ಗೋಮಾಂಸದ ಖಾದ್ಯವನ್ನೂ ಸೇರ್ಪಡೆಗೊಳಿಸುವ ಬಗ್ಗೆ ಮನವಿ ಮಾಡಿದ್ದಾರೆ. ಸರ್ಕಾರ ಈ ಮನವಿಯನ್ನು ಪರಿಗಣಿಸಲಿದೆ' ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣಸ್ವಾಮಿ, 'ಸರ್ಕಾರಿ ವಸತಿನಿಲಯಗಳಲ್ಲಿ ಗೋಮಾಂಸ ಖಾದ್ಯ ಸೇರ್ಪಡೆಗೊಳಿಸುವುದು ಸಾಂಪ್ರದಾಯಿಕ ನಿಯಮಗಳಿಗೆ ವಿರುದ್ಧವಾದುದು ಮಾತ್ರವಲ್ಲದೇ, ಹಲವು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಭಾವನೆಗಳಿಗೂ ಧಕ್ಕೆ ತರುವ ನಿರ್ಧಾರವಾಗುತ್ತದೆ. ಸಚಿವ ಅರಸು ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಈ ವಿಚಾರವಾಗಿ ನಮ್ಮ ಪಕ್ಷವು ಸಚಿವರ ನಿವಾಸದ ಎದುರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೆಪ್ಟೆಂಬರ್ 30ರಂದು ಪ್ರತಿಭಟನೆ ನಡೆಸಲಿದೆ' ಎಂದೂ ಎಚ್ಚರಿಸಿದ್ದಾರೆ.
ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ: ಸಚಿವ
ವಿವಾದದ ಕುರಿತು ಸಚಿವ ಅರಸು ಅವರು ಪ್ರತಿಕ್ರಿಯೆ ನೀಡಿದ್ದು, 'ವಿದ್ಯಾರ್ಥಿಗಳು ಮಾಡಿದ ಮನವಿಯನ್ನು ಆ ಕ್ಷಣದಲ್ಲೇ ಅನುಮೋದಿಸಲು ಅಥವಾ ವಿರೋಧಿಸಲು ಸಾಧ್ಯವಿಲ್ಲ. ಸಚಿವನಾಗಿ ಈ ವಿಚಾರವನ್ನು ಪರಿಗಣಿಸುತ್ತೇವೆ ಎಂದಷ್ಟೇ ಹೇಳಬಹುದು. ನಾನು ಅದನ್ನೇ ಮಾಡಿದ್ದೇನೆ. ಕೃಷ್ಣಸ್ವಾಮಿ ಅವರು ಸಂಪೂರ್ಣ ವಿಚಾರ ತಿಳಿಯದೇ ಮಾತನಾಡುವುದು ಸಮಂಜಸವಲ್ಲ' ಎಂದಿದ್ದಾರೆ.

