ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯನ್ ಹೈಕಮಿಷನರ್ ಫಿಲಿಫ್ ಗ್ರೀನ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ದೆಹಲಿಯಿಂದ ಚಂಡೀಗಢಕ್ಕೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಮಾತ್ರವಲ್ಲದೆ, ಅವರ ಈ ಪ್ರಯಾಣದ ಅನುಭವವನ್ನು ವಿಡಿಯೊ ಜತೆಗೆ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ರೈಲು ಪ್ರಯಾಣದ ಅನುಭವದ ಬಗ್ಗೆ ಮಾತನಾಡಿರುವ ಅವರು, 'ಈ ಹಿಂದೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತ ಪ್ರವಾಸ ಕೈಗೊಂಡಿದ್ದರು. ಆಗ ಭಾರತದ ನೈಜ ಸ್ಥಿತಿ ಅರ್ಥವಾಗಬೇಕಾದರೆ, ಅಲ್ಲಿನ ರೈಲುಗಳಲ್ಲಿ ಪ್ರವಾಸ ಮಾಡಬೇಕು ಎಂದಿದ್ದರು' ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.
'ಭಾರತದ ರೈಲು ಪ್ರಯಾಣ ವಿಶೇಷವಾದ ಅನುಭವ ನೀಡಿತು. ಬೇರೆ ಬೇರೆ ಕಡೆಯಿಂದ ಬಂದ ಹತ್ತಾರು ಜನರನ್ನು ಭೇಟಿ ಮಾಡುವ, ಅವರೊಂದಿಗೆ ಸಂಭಾಷಣೆ ನಡೆಸುವ ಉತ್ತಮ ಅವಕಾಶ ಸಿಕ್ಕಿತು. ಅವರೊಂದಿಗೆ ಕ್ರಿಕೆಟ್ ಬಗ್ಗೆಯೂ ಮಾತನಾಡಿದೆ. ಇದೇ ವೇಳೆ ಕುಟುಂಬವೊಂದು ನನಗೆ ತಿನ್ನಲು ಆಹಾರ ನೀಡಿತು. ಭಾರತಕ್ಕೆ ಭೇಟಿ ನೀಡಿದರೆ, ರೈಲಿನಲ್ಲಿ ಪ್ರಯಾಣಿಸಿ' ಎಂದು ಹೇಳಿಕೊಂಡಿದ್ದಾರೆ.
ಇದರ ಜತೆಗೆ, 'ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿದ್ದೇನೆ' ಎಂದು ಆಸ್ಟ್ರೇಲಿಯನ್ ಹೈಕಮಿಷನರ್ ಫಿಲಿಫ್ ಗ್ರೀನ್ ಹೇಳಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
1991ರಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತಕ್ಕೆ ತಮ್ಮ ಮೊದಲ ಪ್ರವಾಸ ಕೈಗೊಂಡಿದ್ದರು. ಆ ಅನುಭವವನ್ನು 'ಅದ್ಭುತ' ಎಂದು ಬಣ್ಣಿಸಿದ್ದರು. ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ, ನೀವು ಅಲ್ಲಿನ ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸಬೇಕು ಎಂದಿದ್ದರು.

