ನವದೆಹಲಿ(PTI): ವಿಶ್ವಸಂಸ್ಥೆ ಪ್ರಸ್ತಾವಿತ ವಿಶ್ವಭೂಪಟವು ಭಾರತದ ಅಧಿಕೃತ ನಕಾಶೆಯಲ್ಲಿ ತೋರಿಸಿರುವಂತೆ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಅನ್ನು ಒಳಗೊಂಡಿರಬೇಕು. ಯಾವುದೇ 'ತಪ್ಪಾದ' ಅಥವಾ 'ದಾರಿ ತಪ್ಪಿಸುವ' ಪ್ರಸ್ತುತಿ ಇರುವ ಭೂಪಟವನ್ನು ಒಪ್ಪಲಾಗದು ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಹೇಳಿದೆ.
ಎಲ್ಲ ಖಂಡಗಳ ಭೂಪ್ರದೇಶಗಳಿಗೆತಕ್ಕುದಾದ ಪ್ರಾತಿನಿಧ್ಯ ಇರಬೇಕು ಎಂಬ ಉದ್ದೇಶದಿಂದ ಸಿದ್ಧಪಡಿಸಿರುವ ಭೂಪಟ ಕುರಿತ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಭಾರತ ಸಹ ಈ ನಿರ್ಣಯದ ಪರ ಮತ ಚಲಾಯಿಸಿದೆ. ಇದರ ಬೆನ್ನಲ್ಲೇ, ಈಗ ತನ್ನ ನಿಲುವನ್ನೂ ಸ್ಪಷ್ಟಪಡಿಸಿದೆ.
'ವಿಶ್ವಸಂಸ್ಥೆ ತೆಗೆದುಕೊಂಡಿರುವ ನಿರ್ಣಯವು ಭಾರತದ ನಿರ್ದಿಷ್ಟ ನಕಾಶೆ, ಗಡಿ ಹಾಗೂ ಪ್ರದೇಶಗಳ ಚಿತ್ರಣಕ್ಕೆ ಸಂಬಂಧಿಸಿದ ದೃಢೀಕರಣವಾಗುವುದಿಲ್ಲ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
'ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿ ಭಾರತದ ನಿಲುವು ಸ್ಪಷ್ಟವಾಗಿದೆ ಹಾಗೂ ಈ ವಿಚಾರದಲ್ಲಿ ಯಾವುದೇ ರಾಜಿಯಾಗುವ ಪ್ರಶ್ನೆಯೇ ಇಲ್ಲ' ಎಂದರು.
'ವಿವಿಧ ಖಂಡಗಳ ಭೂಪ್ರದೇಶಗಳನ್ನು ಅವುಗಳ ಗಾತ್ರಕ್ಕೆ ತಕ್ಕಂತೆ ಪ್ರಸ್ತುತಪಡಿಸಿರುವಂತಹ ಭೂಪಟಗಳ ಬಳಕೆ ಉತ್ತೇಜಿಸುವುದು ವಿಶ್ವಸಂಸ್ಥೆಯ ಈ ನಿರ್ಣಯದ ಉದ್ದೇಶ. ಈ ನಿರ್ಣಯವು ಭಾರತದ ಯಾವುದೇ ನಿರ್ದಿಷ್ಟ ನಕಾಶೆಯನ್ನು ಅನುಮೋದಿಸು ವುದಿಲ್ಲ. ಅಂತರರಾಷ್ಟ್ರೀಯ ಗಡಿಗಳು ಅಥವಾ ಸ್ಥಳಗಳ ಹೆಸರಿಗೆ ಸಂಬಂಧಿಸಿದ ವಿವಾದಗಳಿಗೆ ಪರಿಹಾರವನ್ನೂ ನೀಡುವುದಿಲ್ಲ' ಎಂದು ಹೇಳಿದರು.
ಟೋಗೊ ಮಂಡಿಸಿದ ನಿರ್ಣಯದ ಪರವಾಗಿ 164 ಮತಗಳು ಚಲಾವಣೆಯಾಗಿದ್ದವು. ಅಮೆರಿಕ ಈ ನಿರ್ಣಯದ ವಿರುದ್ಧ ಮತ ಹಾಕಿದ ಏಕೈಕ ದೇಶ. ಎಸ್ಟೋನಿಯಾ, ಜಾರ್ಜಿಯಾ, ಲಿಥುವೇನಿಯಾ, ಮಾಲ್ಡೋವಾ, ಸರ್ಬಿಯಾ ಹಾಗೂ ಉಕ್ರೇನ್ ಮತದಾನದಿಂದ ದೂರ ಉಳಿದಿದ್ದವು.

