ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರಕ್ಕೆ ತಲುಪಿದೆ. ಉಭಯ ದೇಶಗಳ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ಮತ್ತು ರಾಜಕೀಯ ಬಾಂಧವ್ಯವು ಅತ್ಯಂತ ವಿಶೇಷವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ಯಾರಿಸ್ನಲ್ಲಿ ಸ್ವಾಮಿನಾರಾಯಣ ದೇವಸ್ಥಾನದ ಉದ್ಘಾಟನಾ ಸಮಾರಂಭವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
'ಪ್ಯಾರಿಸ್ನ ಈ ಭವ್ಯ ದೇವಾಲಯವು ಉಭಯ ದೇಶಗಳ ನಡುವಿನ ಸಹಕಾರದ ಸಂಕೇತವಾಗಿ ಶತಮಾನಗಳ ಕಾಲ ಬೆಳಗಲಿದೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
'ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಬಾಂಧವ್ಯವು ಹೊಸ ಎತ್ತರಕ್ಕೆ ತಲುಪಿದೆ. ನನ್ನ ಸ್ನೇಹಿತ, ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ 'ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ'ಯನ್ನು ರೂಪಿಸಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ.
'ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ), ರಕ್ಷಣೆ, ಬಾಹ್ಯಾಕಾಶ ಮತ್ತು ಹವಾಮಾನ ಕ್ರಿಯೆಯವರೆಗೆ ಭಾರತ ಮತ್ತು ಫ್ರಾನ್ಸ್ ಹೊಸ ವೇಗದೊಂದಿಗೆ ಒಟ್ಟಾಗಿ ಮುನ್ನಡೆಯುತ್ತಿವೆ' ಎಂದು ಮೋದಿ ತಿಳಿಸಿದ್ದಾರೆ.
'ನಾವು 2026ನೇ ವರ್ಷವನ್ನು 'ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷ' ಎಂದೂ ಆಚರಿಸುತ್ತಿದ್ದೇವೆ. ಈ ರಣತಂತ್ರದ ಪಾಲುದಾರಿಕೆಯು ವಿಶೇಷವಾಗಿದೆ. ಏಕೆಂದರೆ ಇದು ನಮ್ಮ ದೀರ್ಘಕಾಲದ ಸಾಂಸ್ಕೃತಿಕ ಮತ್ತು ರಾಜಕೀಯ ಸಂಬಂಧಗಳ ಗಟ್ಟಿ ಅಡಿಪಾಯದ ಮೇಲೆ ನಿಂತಿದೆ' ಎಂದಿದ್ದಾರೆ.
ಈಚೆಗೆ ಭಾರತ ಮತ್ತು ಫ್ರಾನ್ಸ್ ನಡುವಿನ ಜಂಟಿ ಉದ್ಯಮದ ಸಾಧ್ಯತೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಫ್ರಾನ್ಸ್ನಲ್ಲಿ ಭಾರತೀಯ ಯೋಧರ ತ್ಯಾಗವು ಇಂದಿಗೂ ಜನರ ಹೃದಯದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ ಎಂದು ಸ್ಮರಿಸಿದ್ದಾರೆ.
'ಸಂಸ್ಕೃತವನ್ನು ಜನಪ್ರಿಯಗೊಳಿಸುವಲ್ಲಿ ಫ್ರೆಂಚ್ ವಿದ್ವಾಂಸರು ಪ್ರಮುಖ ಪಾತ್ರವಹಿಸಿದ್ದರು. ಇದರ ಬಗ್ಗೆ ಭಾಷಾ ಪ್ರೇಮಿಗಳಿಗೂ ತಿಳಿದಿದೆ. ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಬಗ್ಗೆ ರೊಮೈನ್ ರೋಲ್ಯಾಂಡ್ ಅವರ ಬರಹಗಳು ಉಭಯ ದೇಶಗಳನ್ನು ಹತ್ತಿರ ತಂದವು' ಎಂದಿದ್ದಾರೆ.
ಪ್ಯಾರಿಸ್ನಿಂದ ಪುದುಚೇರಿಯ ಶ್ರೀ ಅರವಿಂದೋ ಆಶ್ರಮಕ್ಕೆ 'ದಿ ಮದರ್' ಅವರ ಆಧ್ಯಾತ್ಮಿಕ ಪ್ರಯಾಣವು ಅಸಂಖ್ಯಾತ ಭಾರತೀಯ ಮತ್ತು ಫ್ರೆಂಚ್ ನಿವಾಸಿಗಳಿಗೆ ಅಪಾರ ಸ್ಫೂರ್ತಿ ನೀಡಿದೆ. ಹಾಗೆಯೇ, ದಶಕಗಳ ಹಿಂದೆ ಶ್ರೀಲ ಪ್ರಭುಪಾದ ಸ್ವಾಮಿಯವರೂ ಫ್ರಾನ್ಸ್ಗೆ ಭೇಟಿ ನೀಡಿ, ಇಸ್ಕಾನ್ ಮೂಲಕ ಆಧ್ಯಾತ್ಮಿಕ ಬಾಂಧವ್ಯದಲ್ಲಿ ಹೊಸ ಅಧ್ಯಾಯ ತೆರೆದಿದ್ದರು ಎಂದೂ ಸ್ಮರಿಸಿದ್ದಾರೆ.
'ಇಂದು ಯೋಗವು ಉಭಯ ದೇಶಗಳ ಜನರ ನಡುವಿನ ಸಂಪರ್ಕಕ್ಕೆ ಸೇತುವೆಯಾಗಿದೆ. ಅಂತರರಾಷ್ಟ್ರೀಯ ಯೋಗ ದಿನದಂದು ಐಫೆಲ್ ಟವರ್ನಿಂದ ಬಂದ ಚಿತ್ರಗಳು ಫ್ರಾನ್ಸ್ನಲ್ಲಿ ಯೋಗಕ್ಕಿರುವ ಅಗಾಧ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತವೆ' ಎಂದಿದ್ದಾರೆ.
ಸ್ವಾಮಿನಾರಾಯಣ ದೇವಸ್ಥಾನವು 'ಮೇಡ್ ಇನ್ ಇಂಡಿಯಾ' ಮತ್ತು 'ಬಿಲ್ಟ್ ಇನ್ ಫ್ರಾನ್ಸ್' ಸಾಧ್ಯತೆಗಳಿಗೆ ಹೊಸ ಆಯಾಮ ನೀಡುತ್ತದೆ. ದೇಗುಲದ ಅನೇಕ ಕಲ್ಲುಗಳನ್ನು ಭಾರತದಲ್ಲಿ ಕೆತ್ತಲಾಗಿದೆ. ಭಾರತದ ಪ್ರಾಚೀನ ಶಿಲ್ಪಕಲೆಯನ್ನು ಫ್ರಾನ್ಸ್ನ ಆಧುನಿಕ ತಂತ್ರಜ್ಞಾನದೊಂದಿಗೆ ಸಮ್ಮಿಳನಗೊಳಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಮಯ ಸಿಕ್ಕಾಗ ಖಂಡಿತವಾಗಿಯೂ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದಿದ್ದಾರೆ.

