ಲಖನೌ: ಕೃತಕ ಬುದ್ಧಿಮತ್ತೆಯನ್ನು ಸಾರ್ವಜನಿಕರ ಒಳಿತಿಗಾಗಿ ಬಳಸಬೇಕು. ನಕಾರಾತ್ಮಕ ರಾಜಕೀಯ ಮಾಡಲು ಅಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸೋಮವಾರ(ಸೆ.7) ಹೇಳಿದ್ದಾರೆ.
ಎಐ ಅನ್ನು ಒಳ್ಳೆಯದಕ್ಕೆ ಬಳಸಬೇಕು, ನಕಾರಾತ್ಮಕ ರಾಜಕೀಯಕ್ಕಲ್ಲ. ಆದರೆ, ಇದೀಗ ಅಧಿಕಾರದಲ್ಲಿರುವವರು ಸರ್ಕಾರಿ ಹಣವನ್ನು ಬಳಸಿಕೊಂಡು ಎಐ ವಿಡಿಯೊಗಳ ಮೂಲಕ ಪಿತೂರಿಗಳನ್ನು ಮಾಡುತ್ತಿದ್ದಾರೆ. ಅವರು ಆ ರೀತಿಯ ವಿಡಿಯೊ ಮಾಡುವುದನ್ನು ಮುಂದುವರಿಸಿದರೆ, ನಾವೂ ಅದನ್ನು ಆರಂಭಿಸುತ್ತೇವೆ. ಎಐ ಮೂಲಕ ಅವರಿಗಿಂತ ಉತ್ತಮ ರೀತಿಯ ವಿಡಿಯೊ ಮತ್ತು ಹಾಡುಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿದ್ದಾರೆ.
ಎಐ ಎನ್ನುವುದು ಸಮಾಜಕ್ಕೆ ಒಳಿತನ್ನು ತರುವಂತಹದ್ದು. ವೈದ್ಯಕೀಯ ಚಿಕಿತ್ಸೆ, ಕೃಪಿ ಮತ್ತು ಹವಾಮಾನ ಮುನ್ಸೂಚನೆ ಸೇರಿದಂತೆ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಬೇಕು ಎಂದು ಹೇಳಿದ್ದಾರೆ.
ಕೃತಕಬುದ್ಧಿಮತ್ತೆಯಿಂದ ಹವಾಮಾನ ಮುನ್ಸೂಚನೆ ದೊರೆಯುವುದರಿಂದ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು ಮತ್ತು ತಮ್ಮ ಉತ್ಪನ್ನಕ್ಕೆ ಸರಿಯಾದ ಬೆಲೆಯನ್ನು ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ.

