ನವದೆಹಲಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ಕಸ್ತೂರಿರಂಗನ್ ವರದಿ ಜಾರಿಗೊಳಿಸುವ ಮುನ್ನ ಆ ಭಾಗದ ಜನರ ಅಹವಾಲನ್ನು ಕೇಂದ್ರ ಸರ್ಕಾರ ಆಲಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದರು.
ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ಚಾತುರ್ಮಾಸ ನಡೆಸುತ್ತಿರುವ ಸ್ವಾಮೀಜಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಭೇಟಿ ಮಾಡಿದರು.
ಈ ವೇಳೆ ನೀಡಿದ ಲಿಖಿತ ಪ್ರಸ್ತಾವದಲ್ಲಿ ಸ್ವಾಮೀಜಿ ಈ ಸಲಹೆಯನ್ನು ನೀಡಿದರು. ಈ ಬಗ್ಗೆ ಖಂಡಿತ ವಿಚಾರ ಮಾಡುವುದಾಗಿ ಶಾ ಹೇಳಿದರು ಎಂದು ಮಠದ ಪ್ರಕಟಣೆ ತಿಳಿಸಿದೆ.
ವರದಿ ಜಾರಿಗೆ ಮುನ್ನ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಆತಂಕ, ಭಯ ಹಾಗೂ ಗೊಂದಲವನ್ನು ನಿವಾರಿಸಲು ಆದ್ಯತೆ ನೀಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

