ನವದೆಹಲಿ: ಅಶ್ಲೀಲ ಚಿತ್ರಗಳ ಆಯಪ್‌ಗಳ ಸೋಗಿನಲ್ಲಿ ಬರುವ ದುರುದ್ದೇಶಪೂರಿತ ಆಯಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಸೈಬರ್ ಖದೀಮರು ಬಳಕೆದಾರರ ಖಾತೆಗಳಿಂದ ಹಣ ಕದಿಯುತ್ತಾರೆ ಎಂಬುದಾಗಿ ಕೇಂದ್ರ ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಎಚ್ಚರಿಸಿದೆ.
ಖದೀಮರು ಈ ಆಯಪ್‌ಗಳ ಮೂಲಕ ಬಳಕೆದಾರರ ಮೊಬೈಲ್ ಫೋನ್‌ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಅವರಿಗೆ ಗೊತ್ತಿಲ್ಲದೆ ಹಣಕಾಸಿನ ವಹಿವಾಟು ನಡೆಸಿರುವ ಘಟನೆಗಳು ವರದಿಯಾಗಿವೆ ಎಂದು ಅದು ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಇಂಥ ಆಯಪ್‌ಗಳ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಸೈಬರ್ ಅಪರಾಧ ಬೆದರಿಕೆ ವಿಶ್ಲೇಷಣಾ ಘಟಕ (ಎನ್‌ಸಿಟಿಎಯು) ತಿಳಿಸಿದೆ.
""Night Play", "Reloop", "Kyss", "Vimo", "Rivo", "Nexo" ಮತ್ತು "Vixa" "ಸೇರಿದಂತೆ ಇಂಥ ಹಲವು ದುರುದ್ದೇಶಪೂರಿತ ಆಯಪ್‌ಗಳನ್ನು ಆಗಸ್ಟ್ 26 ರಂದು ಹೊರಡಿಸಿದ ಮಾರ್ಗಸೂಚಿಯಲ್ಲಿ ಅದು ಪಟ್ಟಿಮಾಡಿದೆ.
ಇನ್‌ಸ್ಟಾಲ್ ಆದ ತಕ್ಷಣ ಈ ಆಯಪ್‌ಗಳು ಆಯಕ್ಸೆಸಿಬಿಲಿಟಿಗೆ ಪ್ರವೇಶ ಸೇರಿದಂತೆ ಹಲವು ಸೂಕ್ಷ್ಮ ಅನುಮತಿಗಳನ್ನು ಕೇಳುತ್ತವೆ. ಬಳಕೆದಾರರು ಇದಕ್ಕೆ ಅನುಮತಿ ನೀಡಿದರೆ, ಆಯಪ್‌ನಲ್ಲಿರುವ ಮಾಲ್‌ವೇರ್ ಫೋನ್ ಮೇಲೆ ನಿಯಂತ್ರಣ ಸಾಧಿಸಿ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತದೆ.
ವಂಚಕರು ಈ ಆಯಪ್‌ಗಳ ಸಹಾಯದಿಂದ ಪರದೆ ಮೇಲಿನ ಮಾಹಿತಿಯನ್ನು ಓದಬಹುದಾಗಿದೆ, ಗುಂಡಿಗಳನ್ನು ಒತ್ತಬಹುದಾಗಿದೆ, ಒಟಿಪಿ ಅಥವಾ ಪಿನ್ ನಮೂದಿಸಬಹುದಾಗಿದೆ ಹಾಗೂ ಹಣ ವರ್ಗಾವಣೆ ಪ್ರಕ್ರಿಯೆಗಳನ್ನು ಅನುಮೋದಿಸಲು ಆಯಕ್ಸೆಸಿಬಿಲಿಟಿ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಬಹುದಾಗಿದೆ.
ಅಪರಿಚಿತ ಆಯಪ್‌ಗಳಿಗೆ Accessibility ಪ್ರವೇಶದ ಅನುಮತಿ ನೀಡದಂತೆ ಎನ್‌ಸಿಟಿಎಯು ಮೊಬೈಲ್ ಬಳಕೆದಾರರಿಗೆ ಮನವಿ ಮಾಡಿದೆ.

