HEALTH TIPS

ಅಕ್ರಮ ಚುನಾವಣೆಗಳಲ್ಲಿ ಸ್ಪರ್ಧಿಸಬೇಡಿ: ವಿರೋಧ ಪಕ್ಷಗಳಿಗೆ ಅಭಿಜಿತ್ ದೀಪ್ಕೆ ಮನವಿ

ಮುಂಬೈ: ಅಕ್ರಮವಾಗಿ ನಡೆಯುವ ಚುನಾವಣೆಗಳಲ್ಲಿ ಭಾಗವಹಿಸುವುದು ಎಂದರೆ ಅಂತಹ ಚುನಾವಣೆಗಳಿಗೆ ಬೆಂಬಲ ಸೂಚಿಸಿದಂತೆ ಎಂದು ವಿರೋಧ ಪಕ್ಷಗಳಿಗೆ 'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ. 


'ವಿಪಕ್ಷಗಳಿಗೆ ನನ್ನದೊಂದು ಮಾತು. ಹೌದು, ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ.  

ಆದರೆ, ಅಕ್ರಮ ನಡೆಯುತ್ತಿರುವಾಗಲೂ ನೀವು ಅದರಲ್ಲಿ ಭಾಗವಹಿಸುವುದನ್ನು ಮುಂದುವರಿಸಿದರೆ, ನೀವು ಆ ಚುನಾವಣೆಗಳಿಗೆ ಕಾನೂನುಬದ್ಧತೆ ತಂದುಕೊಡುತ್ತೀರಿ. ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತಿವೆ ಎಂಬ ಭ್ರಮೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತೀರಿ' ಎಂದು ದೀಪ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಹೊಂದಾಣಿಕೆ ಮಾಡಿಕೊಂಡ (ಫಿಕ್ಸಿಂಗ್‌ ನಡೆದಿರುವ) ಪಂದ್ಯದಲ್ಲಿ ಕೂಡ ಎಲ್ಲ ಕ್ಯಾಚ್‌ಗಳನ್ನು ಕೈ ಚೆಲ್ಲುವುದಿಲ್ಲ. ಕೆಲವನ್ನು ಹಿಡಿಯಲಾಗುತ್ತದೆ. ಪಂದ್ಯವು ತೀವ್ರ ಕುತೂಹಲದಿಂದ ಕೂಡಿದೆ ಎಂಬಂತೆ ಮಾಡಲು ಕೊನೆಯ ಓವರ್‌ವರೆಗೂ ಎಳೆದುಕೊಂಡು ಹೋಗಲಾಗುತ್ತದೆ. ಅದೇ ರೀತಿ, ನೀವು ಸ್ಪರ್ಧೆಯಲ್ಲಿ ಮುಂದುವರಿಯಲು ಮತ್ತು ನಿಜವಾದ ಸ್ಪರ್ಧೆ ನಡೆದಿದೆ ಎಂದು ಜನ ನಂಬುವಂತೆ ಮಾಡಲು ನಿಮಗೆ ಕೆಲವೇ ಕೆಲವು ಗೆಲುವುಗಳನ್ನು ನೀಡಲಾಗುತ್ತದೆ. ಆ ಕೆಲವು ಗೆಲುವುಗಳು ನಿಮ್ಮನ್ನು ಆಟದಲ್ಲಿ ಮುಂದುವರಿಯುವಂತೆ ಮತ್ತು ಇಡೀ ಪ್ರಕ್ರಿಯೆಯು ನಿಜವಾದದ್ದು ಎಂದು ತೋರಿಸುವ ಪ್ರಯತ್ನಗಳಷ್ಟೇ' ಎಂದು ದೀಪ್ಕೆ ಹೇಳಿದ್ದಾರೆ.

ಅವರ ಪ್ರಕಾರ, ರಾಜಕೀಯ ಪಕ್ಷಗಳು 'ತಾವು ಸ್ಪರ್ಧಿಸದಿದ್ದರೆ ತಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ ಎಂಬ ಭಯದಿಂದ ಸ್ಪರ್ಧಿಸುತ್ತಲೇ ಇರುತ್ತವೆ' ಎಂದಿದ್ದಾರೆ.

'ಆದರೆ ಮತಗಳನ್ನು ಕದಿಯಲಾಗುತ್ತಿದೆ, ನಿಮ್ಮ ಶಾಸಕರು ಮತ್ತು ಸಂಸದರನ್ನು ಆಮಿಷವೊಡ್ಡಿ ಸೆಳೆಯಲಾಗುತ್ತಿದೆ ಹಾಗೂ ನಿಮ್ಮ ಪಕ್ಷಗಳನ್ನೇ ಒಡೆಯಲಾಗುತ್ತಿರುವಾಗ ನೀವು ಯಾವ ರೀತಿಯ ಅಸ್ತಿತ್ವವನ್ನು ರಕ್ಷಿಸಲು ಯತ್ನಿಸುತ್ತಿದ್ದೀರಿ? ಇದು ರಾಜಕೀಯ ಉಳಿವಲ್ಲ. ನಿಮ್ಮನ್ನು ಯಾವಾಗ ಬೇಕಾದರೂ ದುರ್ಬಲಗೊಳಿಸಬಹುದಾದ, ನಿಮ್ಮ ಪಕ್ಷವನ್ನು ಒಡೆಯಬಹುದಾದ ಅಥವಾ ನಿಮ್ಮ ಜನಪ್ರತಿನಿಧಿಗಳನ್ನು ಖರೀದಿಸಬಹುದಾದ ವ್ಯವಸ್ಥೆಯಲ್ಲಿ ನೀವು ಸುಮ್ಮನೆ ಜೀವಂತವಾಗಿರಲು ಯತ್ನಿಸುತ್ತಿದ್ದೀರಷ್ಟೇ. ಹೀಗೆ ಎಷ್ಟು ದಿನ ಬದುಕಲು ಸಾಧ್ಯ?' ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.

ರಾಜಕೀಯ ಪಕ್ಷದ ನಾಯಕರು ತಮಗೆ ಮುಖ್ಯವೆನಿಸುವ ರಾಜ್ಯಗಳಲ್ಲಿ ಅಕ್ರಮ ನಡೆದಾಗ ಮಾತ್ರ ಮಾತನಾಡಿ, ಬೇರೆಡೆ ನಡೆದಾಗ ಮೌನವಾಗಿರಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

'ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದರೆ, ಅದು ಯಾವ ರಾಜ್ಯ ಅಥವಾ ಯಾವ ಪಕ್ಷಕ್ಕೆ ಹಾನಿಯಾಗಿದೆ ಎಂಬುದನ್ನು ನೋಡದೆ ಖಂಡಿಸಬೇಕು. ಆಟದಲ್ಲಿ ಮೋಸವಿದೆ ಎಂದು ಹೇಳುತ್ತಲೇ ನೀವು ಅದರಲ್ಲಿ ಆಟವಾಡಲು ಸಾಧ್ಯವಿಲ್ಲ. ನಿಮ್ಮ ಭಾಗವಹಿಸುವಿಕೆಯೇ ಇಂತಹ ಅಕ್ರಮ ಚುನಾವಣೆಗಳಿಗೆ ಮಾನ್ಯತೆ ನೀಡುತ್ತದೆ. ನಿಮ್ಮ ರಾಜಕೀಯ ಉಳಿವಿನ ಬಗ್ಗೆ ಯೋಚಿಸುವ ಮೊದಲು ದೇಶ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಯೋಚಿಸಿ. ದೃಢ ನಿಲುವು ತಳೆಯಿರಿ ಮತ್ತು ಅಕ್ರಮ ಚುನಾವಣೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ' ಎಂದು ಅವರು ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries