ಕೋಲ್ಕತ್ತಾ: 2007ರ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿಗ್ರಾಮ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಏಕಸದಸ್ಯ ಪೀಠ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ರವೀಂದ್ರ ವಿಠಲರಾವ್ ಘುಗೆ ನೇತೃತ್ವದ ವಿಭಾಗೀಯ ಪೀಠವು, ಅಪರಾಧ ಪ್ರಕರಣಗಳಲ್ಲಿ ಆರೋಪಿಗೆ ಇಂತಹ ಮಧ್ಯಂತರ ರಕ್ಷಣೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
'ಬಂಧನದ ಬಳಿಕ ಆರೋಪಿಗೆ ಜಾಮೀನು ಕೋರಲು ಹಕ್ಕಿದೆ. ಬಂಧನವಾಗುವ ಆತಂಕವಿದ್ದರೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಆದರೆ ಕಾನೂನಿನ ಸಾಮಾನ್ಯ ಪ್ರಕ್ರಿಯೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ' ಎಂದು ಹೇಳಿದೆ.
'ಕಾನೂನಿನಡಿ ಎಲ್ಲರೂ ಸಮಾನರು. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವ್ಯಕ್ತಿ ಎಂಬ ಕಾರಣಕ್ಕೆ ಕಾನೂನನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ಪೀಠ ಅಭಿಪ್ರಾಯಪಟ್ಟಿದೆ.
ಗುರುವಾರ ನ್ಯಾಯಮೂರ್ತಿ ಓಂ ಪ್ರಕಾಶ್ ರಾಯ್ ಅವರಿದ್ದ ಏಕಸದಸ್ಯ ಪೀಠವು, ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ 12ರವರೆಗೆ ಪ್ರಧಾನ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿತ್ತು.
ಏಕಸದಸ್ಯ ಪೀಠದ ಆದೇಶ ರದ್ದಾಗಿರುವುದರಿಂದ, ಕಾಂಟಾಯ್ ಎಸಿಜೆಎಂ ನ್ಯಾಯಾಲಯವು ಮಿಲನ್ ಪ್ರಧಾನ್ ಅವರಿಗೆ ಅಕ್ಟೋಬರ್ 7ರವರೆಗೆ ವಿಧಿಸಿರುವ ನ್ಯಾಯಾಂಗ ಬಂಧನ ಆದೇಶ ಜಾರಿಗೆ ಬರಲಿದೆ.
ನಂದಿಗ್ರಾಮ ಉಪಚುನಾವಣೆ ಅಕ್ಟೋಬರ್ 6ರಂದು ನಡೆಯಲಿದೆ.

