ಉಕ್ರೇನ್ ಯುದ್ಧದ ನಡುವೆಯೇ ಯುರೋಪ್ ದೇಶಗಳು ಮತ್ತೊಂದು ದೀರ್ಘಾವಧಿಯ ಭದ್ರತಾ ಬಿಕ್ಕಟ್ಟಿನ ಹೊಸ್ತಿಲಲ್ಲಿ ಬಂದು ನಿಂತಿವೆ. ರಷ್ಯಾದಿಂದ ಎದುರಾಗಬಹುದಾದ 'ಹೈಬ್ರಿಡ್ ದಾಳಿ' (ಸಾಂಪ್ರದಾಯಿಕವಲ್ಲದ ಯುದ್ಧ ತಂತ್ರ) ಅಪಾಯವನ್ನು ಎದುರಿಸಲು ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿದಂತೆ ಪ್ರಮುಖ ದೇಶಗಳು ಸಿದ್ಧತೆಗಳಲ್ಲಿ ತೊಡಗಿರುವುದು ಜಾಗತಿಕ ರಾಜಕೀಯದಲ್ಲಿ ಆತಂಕದ ಅಲೆಯನ್ನು ಎಬ್ಬಿಸಿದೆ.
ಹಲವಾರು ವರ್ಷಗಳಿಂದ ಯುರೋಪ್ ದೇಶಗಳನ್ನು ಯಾವ ಭಯ ಕಾಡುತ್ತಿತ್ತೋ, ಅದೇ ಭದ್ರತಾ ಬಿಕ್ಕಟ್ಟು ಇದೀಗ ಎದುರಾಗಿದೆ.
ಉಕ್ರೇನ್ ಮಾತ್ರವಲ್ಲದೆ, ನ್ಯಾಟೊ ಪಡೆಗಳ ಬದ್ಧತೆಯನ್ನು ಪರೀಕ್ಷಿಸಲು ರಷ್ಯಾ ಮುಂದಾಗಲಿದೆ ಎಂಬ ವದಂತಿಗಳ ಬೆನ್ನಲ್ಲೇ ಯುರೋಪಿಯನ್ ರಾಷ್ಟ್ರಗಳು ತಮ್ಮನ್ನು ರಕ್ಷಿಸಿಕೊಳ್ಳಲು ಸನ್ನದ್ಧವಾಗುತ್ತಿವೆ. ಡ್ರೋನ್, ಕ್ಷಿಪಣಿ ದಾಳಿಗಳು ಹಾಗೂ ಸೈಬರ್ ದಾಳಿಗಳ ಕುರಿತು ಹೆಚ್ಚುತ್ತಿರುವ ಕಳವಳಗಳ ನಡುವೆ ಯುರೋಪ್ ದೇಶಗಳು ರಷ್ಯಾ ಜೊತೆಗಿನ ಸಂಭಾವ್ಯ ಸಂಘರ್ಷಕ್ಕೆ ಸಿದ್ಧಗೊಳ್ಳುತ್ತಿವೆ. ಆದಾಗ್ಯೂ, ರಷ್ಯಾಗೆ ಯುರೋಪ್ ವಿರುದ್ಧ ಯಾವುದೇ ಆಕ್ರಮಣಕಾರಿ ದಾಳಿ ಮಾಡುವ ಉದ್ದೇಶಗಳಿಲ್ಲ ಎಂದು ವ್ಲಾಡಿಮಿರ್ ಪುಟಿನ್ ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು, "ಯುರೋಪ್ ಮತ್ತು ಫ್ರಾನ್ಸ್‌ಗೆ ರಷ್ಯಾದಿಂದ ಬೆದರಿಕೆಗಳು ತೀವ್ರಗೊಂಡಿವೆ" ಎಂದು ಹೇಳಿರುವುದು ಮೇಲಿನ ಅಂಶಗಳಿಗೆ ಪುಷ್ಟಿ ನೀಡಿದೆ. ಫ್ರಾನ್ಸ್ ವಿರುದ್ಧದ ಇತ್ತೀಚಿನ ಹೈಬ್ರಿಡ್ ದಾಳಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಮ್ಯಾಕ್ರಾನ್ ಹೇಳಿದ್ದಾರೆ. 2027ರ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿಯೇ ಅವರ ಈ ಹೇಳಿಕೆ ಹೊರಬಿದ್ದಿದೆ.
ನ್ಯಾಟೊ ಸದಸ್ಯ ರಾಷ್ಟ್ರಗಳು ಮತ್ತು ಉಕ್ರೇನ್‌ಗೆ ಬೆಂಬಲ ನೀಡುವ ದೇಶಗಳ ವಿರುದ್ಧ ರಷ್ಯಾ ಡ್ರೋನ್ ಅಥವಾ ಕ್ಷಿಪಣಿ ದಾಳಿ ನಡೆಸಬಹುದು ಎಂದು ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಸಂಸತ್ತಿಗೆ ತಿಳಿಸಿದ್ದಾರೆ. ಸದಸ್ಯ ರಾಷ್ಟ್ರದ ವಿರುದ್ಧ ಆಕ್ರಮಣ ನಡೆದರೆ ನ್ಯಾಟೊದ ಸಾಮೂಹಿಕ ರಕ್ಷಣಾ ಬದ್ಧತೆಗಳನ್ನು ಜಾರಿಗೆ ತರಲಾಗುತ್ತದೆಯೇ ಎಂದು ಪರೀಕ್ಷಿಸಲು ರಷ್ಯಾ 'ಆಕಸ್ಮಿಕ' ಎಂಬಂತೆ ದಾಳಿಗಳನ್ನು ನಡೆಸಬಹುದು ಎಂದು ಟಸ್ಕ್ ಹೇಳಿದ್ದಾರೆ.
ಹೈ ಅಲರ್ಟ್‌ನಲ್ಲಿ ಯುರೋಪ್ ದೇಶಗಳು...
ವಾಯುಪ್ರದೇಶ ಉಲ್ಲಂಘನೆ, ಶಂಕಿತ ದುಷ್ಕೃತ್ಯ ಮತ್ತು ರಷ್ಯಾ ಬೆಂಬಲಿತ ಇತರ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಯುರೋಪಿಯನ್ ದೇಶಗಳು ವರದಿ ಮಾಡಿವೆ. ರಷ್ಯಾದ ಈ ಕ್ರಮಗಳು ಉಕ್ರೇನ್‌ಗೆ ಯುರೋಪಿಯನ್ ದೇಶಗಳು ನೀಡುತ್ತಿರುವ ಬೆಂಬಲವನ್ನು ಕುಗ್ಗಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ನ್ಯಾಟೊ ದೇಶಗಳು ಹೇಳಿವೆ.
ಸೈಬರ್ ದಾಳಿಗಳು, ದುಷ್ಕೃತ್ಯ, ಸುಳ್ಳು ಮಾಹಿತಿ ಪ್ರಸಾರ, ರಾಜಕೀಯ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮತ್ತು ಡ್ರೋನ್‌ಗಳನ್ನು ಬಳಕೆ ಮಾಡುವುದು ಹೈಬ್ರಿಡ್ ದಾಳಿಯ ಭಾಗ ಎಂದಿರುವ ಯುರೋಪಿಯನ್ ಅಧಿಕಾರಿಗಳು, ರಷ್ಯಾ ಈ ವಿಧಾನಗಳನ್ನು ಪದೇಪದೇ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ರಷ್ಯಾ ಅಂತಹ ದಾಳಿಗಳ ಹೊಣೆಯನ್ನು ನಿರಾಕರಿಸಿದೆ.
ಆಗಸ್ಟ್‌ನಲ್ಲಿ ಲೈಪ್‌ಜಿಗ್ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಗೆ ರಷ್ಯಾವನ್ನು ಆರೋಪಿಸಿದ ಜರ್ಮನಿ, ಸಂಭಾವ್ಯ ಸಂಘರ್ಷ ಎದುರಿಸಲು ಮೂಲಸೌಕರ್ಯಗಳನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿದೆ. ಲಿಥುವೇನಿಯಾ ದೇಶವೂ ಇದೇ ಹಾದಿ ಹಿಡಿದಿದೆ.
ಭದ್ರತೆಗೆ ಒತ್ತು ನೀಡುವುದು ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವುದಾಗಿ ಸ್ವಿಸ್ ಸರ್ಕಾರ ಹೇಳಿದೆ. ಯುರೋಪ್‌ನಲ್ಲಿ ಭದ್ರತಾ ಕಳವಳಗಳು ಹೆಚ್ಚಾದ ವರದಿಗಳ ಬೆನ್ನಲ್ಲೇ ಸ್ವಿಸ್ ಫೆಡರಲ್ ಸರ್ಕಾರ ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿದೆ.
ಆದಾಗ್ಯೂ, ನ್ಯಾಟೊ ಮೇಲೆ ರಷ್ಯಾದ ತಕ್ಷಣದ ದಾಳಿ ನಿಶ್ಚಿತ ಎಂದು ಯುರೋಪಿಯನ್ ಅಧಿಕಾರಿಗಳು ಬಹಿರಂಗವಾಗಿ ದೃಢಪಡಿಸಿಲ್ಲ. ಆದರೆ ಯುರೋಪ್‌ನಲ್ಲಿನ ಸಿದ್ಧತೆಗಳು ಮತ್ತು ಪರಿಸ್ಥಿತಿಯನ್ನು ನೋಡಿದರೆ ಅವರು ಅದಕ್ಕೆ ಸಜ್ಜಾಗುತ್ತಿರುವಂತೆ ತೋರುತ್ತಿದೆ.
ರಷ್ಯಾದೊಂದಿಗೆ ಹೆಚ್ಚಿದ ಜರ್ಮನಿಯ ಉದ್ವಿಗ್ನತೆ
ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಜರ್ಮನ್ ಕಾನ್ಸುಲೇಟ್ ಜನರಲ್ ಕಚೇರಿಯು ಶುಕ್ರವಾರ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಇಲ್ಲಿನ ಐದಕ್ಕೂ ಹೆಚ್ಚು ದಶಕಗಳ ರಾಜತಾಂತ್ರಿಕ ಚಟುವಟಿಕೆಗೆ ಅಂತ್ಯ ಹಾಡಿದೆ.
ರಾಯಭಾರ ಕಚೇರಿಯ ವೆಬ್‌ಸೈಟ್ ಪ್ರಕಾರ, ಅದರ ಜವಾಬ್ದಾರಿಗಳನ್ನು ಈಗ ಮಾಸ್ಕೋದಲ್ಲಿರುವ ಜರ್ಮನ್ ರಾಯಭಾರ ಕಚೇರಿ ನಿರ್ವಹಿಸಲಿದೆ. ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಜರ್ಮನ್ ಕಾನ್ಸುಲೇಟ್ ಜನರಲ್ 1972 ರಿಂದ ಕಾರ್ಯನಿರ್ವಹಿಸುತ್ತಿತ್ತು.
ರಷ್ಯಾದಲ್ಲಿ ಜರ್ಮನ್ ಕಾನ್ಸುಲೇಟ್ ಮುಚ್ಚಿದ್ದಕ್ಕೆ ಪ್ರತಿಕ್ರಿಯಿಸಿದ ರೋಮ್ ಮೂಲದ ಪತ್ರಕರ್ತ ಥಾಮಸ್ ಫಾಜಿ, ನಾವು 3ನೇ ಮಹಾಯುದ್ಧಕ್ಕೆ ಎಷ್ಟು ಹತ್ತಿರದಲ್ಲಿದ್ದೇವೆ ಎಂಬುದು ಜನರಿಗೆ ತಿಳಿದಿಲ್ಲ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 16 ರಂದು ಪ್ರಕಟವಾದ ವರದಿಯೊಂದರ ಪ್ರಕಾರ, ಜರ್ಮನ್ ಆಸ್ಪತ್ರೆಗಳು ಸಂಭಾವ್ಯ ಯುದ್ಧಕ್ಕೆ ಸಿದ್ಧವಾಗುತ್ತಿದ್ದು, ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಪ್ರಮುಖ ವೈದ್ಯಕೀಯ ಸೇವೆಗಳಿಗೆ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಜರ್ಮನಿ ಕೆಲಸ ಮಾಡುತ್ತಿದೆ ಎಂದು ವರದಿ ಹೇಳಿದೆ.
ಇತರ ಯುರೋಪಿಯನ್ ದೇಶಗಳ ಸಿದ್ಧತೆ...
ಭದ್ರತಾ ಬಿಕ್ಕಟ್ಟಿನ ಭೀತಿ ಹೆಚ್ಚುತ್ತಿರುವಂತೆ ಯುರೋಪಿನಾದ್ಯಂತ ವಿವಿಧ ದೇಶಗಳು ನಾಗರಿಕ ರಕ್ಷಣೆ ಮತ್ತು ತುರ್ತು-ಸ್ಪಂದನೆ ಯೋಜನೆಗಳನ್ನು ಬಲಪಡಿಸುತ್ತಿವೆ.
ಲಾತ್ವಿಯಾ ತನ್ನ ಪೂರ್ವ ಗಡಿ ಭದ್ರತೆಯನ್ನು ಬಲಪಡಿಸುತ್ತಿದ್ದು, ಡ್ರೋನ್ ಮತ್ತು ಡ್ರೋನ್-ನಿರೋಧಕ ಸಾಮರ್ಥ್ಯಗಳನ್ನು ವಿಸ್ತರಿಸಿದೆ. ಗಡಿಯಲ್ಲಿ ಹೊಸ ಭದ್ರತಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಇಂಗ್ಲೆಂಡ್ (ಯುಕೆ) ಕೂಡ ಮೂಲಭೂತ ತುರ್ತು ಸೇವೆಗಳನ್ನು ಕಾಯ್ದುಕೊಳ್ಳಲು ನಾಗರಿಕರಿಗೆ ತಿಳಿಸಿದೆ. ಕೆಲವು ಡ್ರೋನ್‌ಗಳು ಕಂಡುಬಂದ ನಂತರ ಲುಕ್ಸಂಬರ್ಗ್ ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಇನ್ನೊಂದೆಡೆ ಯುಎಸ್ ಕೂಡ ಯುರೋಪ್‌ನಿಂದ ಸೇನೆ ಹಿಂತೆಗೆದುಕೊಳ್ಳಲು ಚಿಂತನೆ ನಡೆಸಿದೆ. ಎನ್‌ಬಿಸಿ ನ್ಯೂಸ್ ವರದಿಯ ಪ್ರಕಾರ, ಯುರೋಪ್‌ನಿಂದ 25 ರಿಂದ 40 ಸಾವಿರ ಅಮೆರಿಕನ್ ಸೈನಿಕರನ್ನು ಹಿಂತೆಗೆದುಕೊಳ್ಳುವ ಆಯ್ಕೆಗಳನ್ನು ಅಮೆರಿಕ ಪರಿಶೀಲಿಸುತ್ತಿದೆ. ಪ್ರಸ್ತುತ ಯುರೋಪ್‌ನಲ್ಲಿ ಸುಮಾರು 80,000 ಅಮೆರಿಕನ್ ಸೈನಿಕರು ನಿಯೋಜನೆಗೊಂಡಿದ್ದಾರೆ.
ಯುರೋಪ್ ಜೊತೆ ಯುದ್ಧವಿಲ್ಲ ಎಂದ ರಷ್ಯಾ
ಆದಾಗ್ಯೂ, ಯುರೋಪ್ ಎತ್ತಿರುವ ಕಳವಳಗಳನ್ನು ರಷ್ಯಾ ತಿರಸ್ಕರಿಸಿದೆ. ಯುರೋಪಿಯನ್ ದೇಶಗಳ ಕಡೆಗೆ ಯಾವುದೇ ಆಕ್ರಮಣಕಾರಿ ಉದ್ದೇಶಗಳಿಲ್ಲ, ನೆರೆಹೊರೆಯವರೊಂದಿಗೆ ಸಂಬಂಧಗಳನ್ನು ಮರುಸ್ಥಾಪಿಸಲು ಮತ್ತು ಸಹಕರಿಸಲು ರಷ್ಯಾ ಸಿದ್ಧವಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಯುರೋಪಿಯನ್ ನಾಯಕರು ತಮ್ಮ ಸ್ವಂತ ನೀತಿಗಳನ್ನು ಸಮರ್ಥಿಸಿಕೊಳ್ಳಲು ರಷ್ಯಾದ ಬೆದರಿಕೆಯನ್ನು ನೆಪವಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ಅವರೇ ನಮ್ಮೊಂದಿಗೆ ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆ ಎಂದು ರಷ್ಯಾ ಆರೋಪಿಸಿದೆ.
ಬಾಲ್ಟಿಕ್ ಸಮುದ್ರದಲ್ಲಿ ನ್ಯಾಟೊ ಮತ್ತು ಯುರೋಪಿಯನ್ ಮಿಲಿಟರಿ ಪಡೆಗಳು ಅಭ್ಯಾಸ ನಡೆಸುತ್ತಿವೆ ಎಂದು ಪುಟಿನ್ ಆರೋಪಿಸಿದ್ದು, ಅಗತ್ಯಬಿದ್ದರೆ ರಷ್ಯಾ ಸೂಕ್ತ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು, 'ನ್ಯಾಟೊ ಮತ್ತು ರಷ್ಯಾ ನಡುವಿನ ನೇರ ಸಂಘರ್ಷವು ಅತ್ಯಂತ ಕಡಿಮೆ ಅವಧಿಯ ಯುದ್ಧಕ್ಕೆ ಕಾರಣವಾಗಬಹುದು' ಎಂದು ಈ ಹಿಂದೆ ಎಚ್ಚರಿಸಿದ್ದರು.
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ರಷ್ಯಾ ತಕ್ಷಣವೇ ನ್ಯಾಟೊ ದೇಶಗಳ ಮೇಲೆ ನೇರ ದಾಳಿ ನಡೆಸುವ ಸಾಧ್ಯತೆ ಕಡಿಮೆಯಿದ್ದರೂ, ಗಡಿಗಳಲ್ಲಿ ಉದ್ವಿಗ್ನತೆ ಸೃಷ್ಟಿಸುವ ಹಾಗೂ ಯುರೋಪಿನ ಆರ್ಥಿಕ-ಸಾಮಾಜಿಕ ಸ್ಥಿರತೆಯನ್ನು ಕದಡುವ ಯತ್ನಗಳು ಮುಂದುವರಿಯಲಿವೆ. 3ನೇ ಮಹಾಯುದ್ಧದ ಮುನ್ಸೂಚನೆಯೋ ಅಥವಾ ಜಾಗತಿಕ ಬಲಪ್ರದರ್ಶನದ ತಂತ್ರವೋ, ಒಟ್ಟಿನಲ್ಲಿ ಯುರೋಪ್ ಖಂಡವು ಶೀತಲ ಸಮರದ ನಂತರದ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕಾರಿ ಘಟ್ಟವನ್ನು ತಲುಪಿರುವುದಂತೂ ಸತ್ಯ.

