ಟೆಹರಾನ್: ಇರಾನ್‌ನಲ್ಲಿ ಮಹಿಳೆಯರಿಗೆ ಎಂತಹ ಕಠಿಣ ನಿಯಮಗಳು ಜಾರಿಯಲ್ಲಿವೆ ಎಂಬುದು ನಮಗೆಲ್ಲ ತಿಳಿದಿದೆ. ಹಿಜಾಬ್ ಇಲ್ಲದೆ ಮಹಿಳೆಯರು ಹೊರಗೆ ಬರುವಂತೆಯೇ ಇಲ್ಲ. ಪರಿಸ್ಥಿತಿ ಈಗಿರುವಾಗ, ಮಹಿಳೆಯರ ಗುಂಪೊಂದು, ಹಿಜಾಬ್ ಧರಿಸದೇ 10 ಕಿ.ಮೀ ಮ್ಯಾರಥಾನ್ ಓಡಿರುವ ವಿಡಿಯೊ ಸಾಮಾಜಿಕ ಮಾಧ್ಯನದಲ್ಲಿ ಹರಿದಾಡುತ್ತಿದೆ.
ಟೆಹರಾನ್‌ನ ವೆಲಾಯತ್ ಪಾರ್ಕ್‌ನಲ್ಲಿ ಆಯೋಜಿಸಿದ್ದ 10ಕೆ ಓಟದಲ್ಲಿ ಮಹಿಳೆಯರು ಹಿಜಾಬ್ ಹೊರಗಿಟ್ಟು, ಕೂದಲನ್ನು ಬಿಟ್ಟು ಸ್ವಚ್ಛಂದವಾಗಿ ಓಡುವ ಮೂಲಕ ಗಮನ ಸೆಳೆದರು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಮ್ಯಾರಥಾನ್ ಏರ್ಪಡಿಸಲಾಗಿತ್ತು.
ಇದೇ ವೇಳೆ, ಟೆಹ್ರಾನ್‌ನ ಮತ್ತೊಂದು ಭಾಗದಲ್ಲಿ, ಅಲ್ಲಿನ ಸರ್ಕಾರವನ್ನು ಬೆಂಬಲಿಸಿ 'ಜನ್ಫಾದಯಾನ್ ಎ ಇರಾನ್' ರ್‍ಯಾಲಿ ಸಹ ನಡೆಯಿತು. ಇದರಲ್ಲಿ, ಇರಾನ್ ಕ್ರಾಂತಿಕಾರಿ ಗಾರ್ಡ್ಸ್ ಮತ್ತು ದೇಶದ ರಕ್ಷಣೆಗೆ ಪ್ರತಿಜ್ಞೆ ಮಾಡಿರುವ ನೂರಾರು ಸ್ವಯಂಸೇವಕರು ಭಾಗವಹಿಸಿದ್ದರು.
ಎರಡೂ ಕಾರ್ಯಕ್ರಮಗಳು ಮುಖಾಮುಖಿಯಾಗಿಲ್ಲ. ಓಟದ ದೃಶ್ಯಗಳನ್ನು ಇರಾನ್ ಮೂಲದ ಜನರು ತಮ್ಮ ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇರಾನ್‌ನಲ್ಲಿ ಹಿಜಾಬ್ ಕಡ್ಡಾಯವಾಗಿದ್ದರೂ ಅದನ್ನು ಧಿಕ್ಕರಿಸಿ, ಓಟದಲ್ಲಿ ಭಾಗವಹಿಸಿರುವುದು ಹೊಸ ಬೆಳವಣಿಗೆಯಾಗಿದೆ.
ಈ ಹಿಂದೆ ಕಿಶ್ ದ್ವೀಪದಲ್ಲಿ ಇಂತಹದ್ದೇ ಓಟ ಆಯೋಜಿಸಿದ್ದ ಆಯೋಜಕರ ವಿರುದ್ಧ ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿತ್ತು. ಈ ಬೆಳವಣಿಗೆ ಬಳಿಕ ಯಾವ ಕ್ರಮ ಆಗುವುದೋ ಕಾದುನೋಡಬೇಕಿದೆ.

