ನವದೆಹಲಿ (PTI): ಪರಸ್ಪರ ಸ್ಥಳೀಯ ಕರೆನ್ಸಿಯಲ್ಲಿ ವಹಿವಾಟಿಗೆ ಉತ್ತೇಜನ ನೀಡಲು ಭಾರತದ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಮತ್ತು ಅದರ ಪಾಲುದಾರ ರಾಷ್ಟ್ರಗಳನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಶುಕ್ರವಾರ ಒತ್ತಾಯಿಸಿದ್ದಾರೆ.
ಭಾರತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರೂಪಿಸುವಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದ ಏಕೀಕೃತ ಪಾವತಿ ವ್ಯವಸ್ಥೆಯು (ಯುಪಿಐ) ವಾರ್ಷಿಕ 25 ಸಾವಿರ ಕೋಟಿ ವಹಿವಾಟುಗಳನ್ನು ದಾಟಿದೆ. ಇದು ಜಗತ್ತಿನ ಒಟ್ಟು ವಹಿವಾಟು ಪೈಕಿ ಅರ್ಧಕ್ಕೂ ಹೆಚ್ಚಿದೆ. ಇಂದು ಯುಪಿಐಯನ್ನು 11 ದೇಶಗಳಲ್ಲಿ ಅಂಗೀಕರಿಸಲಾಗಿದೆ ಎಂದು ಬ್ರಿಕ್ಸ್‌ನ ಆರಂಭಿಕ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

