ಚಂಡೀಗಢ (PTI): 2015ರ ಪಂಜಾಬ್‌ನ ಬೆಹಬಲ್ ಕಲಾನ್‌ನಲ್ಲಿ ನಡೆದಿದ್ದ ಪೊಲೀಸ್ ಗುಂಡಿನ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ವಿಚಾರಣೆಗೆ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರು ಗೈರಾಗಿದ್ದಾರೆ.
ಇಲ್ಲಿನ ಸೆಕ್ಟರ್ 32ರಲ್ಲಿರುವ ಪಂಜಾಬ್ ಪೊಲೀಸ್ ಅಧಿಕಾರಿಗಳ ಸಂಸ್ಥೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸಮನ್ಸ್ ನೀಡಿತ್ತು. ಸೆಪ್ಟೆಂಬರ್ 30ರ ನಂತರ ವಿಚಾರಣೆಗೆ ಹಾಜರಾಗಲು ಅವಕಾಶ ನೀಡುವಂತೆ ಬಾದಲ್ ಅವರು ಕೋರಿದ್ದರು.
'ಕಳೆದ ತಿಂಗಳು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ದಾಳಿಯಲ್ಲಿ ಬಾದಲ್ ಅವರಿಗೆ ಗಾಯವಾಗಿತ್ತು. ಹೀಗಾಗಿ, ವೈದ್ಯಕೀಯ ತಪಾಸಣೆಗೆ ಅವರು ಹೋಗಬೇಕಾಗಿದೆ' ಎಂದು ಎಸ್‌ಎಡಿ ನಾಯಕರಾದ ಪರಂಬನ್ಸ್ ಸಿಂಗ್ ಬಂಟಿ ರೊಮಾನಾ ಹಾಗೂ ಅರ್ಶ್‌ದೀಪ್ ಸಿಂಗ್ ಕ್ಲೇರ್ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದಾರೆ.
'ಲಿಖಿತ ಪ್ರಶ್ನಾವಳಿ ನೀಡುವಂತೆ ಈಗಾಗಲೇ ಮನವಿ ಮಾಡಿದ್ದೇವೆ. ಮತ್ತೊಮ್ಮೆ ಈ ಬೇಡಿಕೆಯನ್ನು ಎಸ್‌ಐಟಿ ಮುಂದೆ ಇಡುತ್ತೇವೆ' ಎಂದು ಹೇಳಿದ್ದಾರೆ.
'ಇದು ರಾಜಕೀಯ ಪ್ರೇರಿತ ಎಸ್‌ಐಟಿ ಎಂದು ಗೊತ್ತಿದ್ದರೂ ನಾವು ಪ್ರತಿ ಹಂತದಲ್ಲೂ ಸಹಕರಿಸುತ್ತಿದ್ದೇವೆ. ನಮಗೆ ಲಿಖಿತ ಪ್ರಶ್ನಾವಳಿ ನೀಡುವಂತೆ ಕೇಳುತ್ತಲೇ ಇದ್ದೇವೆ. ಆದರೆ, ಲಿಖಿತ ಪ್ರಶ್ನಾವಳಿ ನೀಡಲು ಅವರು ಏಕೆ ಹೆದರುತ್ತಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.
2015ರಲ್ಲಿ ಸಿಖ್ ಸಮುದಾಯದ ಧರ್ಮಗ್ರಂಥ 'ಗುರುಗ್ರಂಥ ಸಾಹಿಬ್'ಗೆ ಅಪಚಾರ ಎಸಗಿದ ಘಟನೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿತ್ತು. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪ್ರತಿಭಟನಕಾರರು ಮೃತಪಟ್ಟಿದ್ದರು.
ಆಗ ಪಂಜಾಬ್‌ನಲ್ಲಿ ಅಕಾಲಿ ದಳ ಅಧಿಕಾರದಲ್ಲಿತ್ತು. ಪ್ರಕಾಶ್ ಸಿಂಗ್ ಬಾದಲ್ ಮುಖ್ಯಮಂತ್ರಿಯಾಗಿದ್ದರು. ಅವರ ಮಗ ಸುಖ್‌ಬೀರ್ ಸಿಂಗ್ ಬಾದಲ್ ಉಪ ಮುಖ್ಯಮಂತ್ರಿ ಆಗಿದ್ದರು.

