ಇಂದೋರ್: ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಕಾಂಗ್ರೆಸ್ ನಿರ್ಧರಿಸಿರುವುದನ್ನು ಟೀಕಿಸಿರುವ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, 'ಗಾಂಧಿ ಕುಟುಂಬವು ದೇಶದ ಸಂವಿಧಾನ ಮತ್ತು ನಿಯಮಗಳಿಗಿಂತ ತಾನೇ ಶ್ರೇಷ್ಠ ಎಂದು ಭಾವಿಸುತ್ತದೆ' ಎಂದು ಕಿಡಿಕಾರಿದ್ದಾರೆ.
ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಿಗೆ ರಾಷ್ಟ್ರೀಯ ಗೀತೆಯನ್ನು ಹಾಡಲು ಕೇವಲ ಮೂರು ನಿಮಿಷ ಹತ್ತು ಸೆಕೆಂಡುಗಳನ್ನು ಸಹ ನೀಡಲು ಸಾಧ್ಯವಿಲ್ಲವೇ?, ಇಂತಹ ನಿರ್ಧಾರ ಕೈಗೊಳ್ಳಲು ವಿರೋಧ ಪಕ್ಷಕ್ಕೆ ಏನು ಅನಿವಾರ್ಯತೆ ಇತ್ತು ಎಂದು ಪ್ರಶ್ನಿಸಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ನೀಡಿದರು, ಆದರೆ ಕಾಂಗ್ರೆಸ್ ಅವರನ್ನು ಅವಮಾನಿಸಿ ಅದನ್ನು ತುಂಡು ತುಂಡಾಗಿ ಹರಿದು ಹಾಕಿತು. ಕಾಂಗ್ರೆಸ್‌ನಿಂದಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಎನ್ನುವ ಕರಾಳ ಅಧ್ಯಾಯ ಉಂಟಾಗಿತ್ತು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆ.19ರಂದು ಇಂದೋರ್‌ನಲ್ಲಿ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದನ್ನು ಟೀಕಿಸಿರುವ ಅನುರಾಗ್ ಠಾಕೂರ್, 'ರಾಹುಲ್ ಗಾಂಧಿ ಅವರು ದೇಶವನ್ನು ಅವಮಾನಿಸುವುದನ್ನು, ಸನಾತನ ಧರ್ಮವನ್ನು ನಿಂದಿಸುವುದನ್ನು ಮತ್ತು ತುಷ್ಟೀಕರಣ ರಾಜಕೀಯವನ್ನು ಬಿಟ್ಟದಿನ ದೇಶದ ಯುವಕರು ಅವರನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸುತ್ತಾರೆ' ಎಂದು ಹೇಳಿದ್ದಾರೆ.

