ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂನಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರನನ್ನು ಪಾಕಿಸ್ತಾನದ ಯಾಸಿರ್ ಎಂದು ಗುರುತಿಸಲಾಗಿದೆ.
'ನಿಷೇಧಿತ ಲಷ್ಕರ್-ಎ-ತಯಬಾ ಭಯೋತ್ಪಾದಕ ಸಂಘಟನೆಗಾಗಿ ಯಾಸಿರ್ ಕೆಲಸ ಮಾಡುತ್ತಿದ್ದ' ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
2024ರಲ್ಲಿ ಪೂಂಛ್‌ನಲ್ಲಿ ಭಾರತೀಯ ವಾಯುಪಡೆಯ ಬೆಂಗಾವಲು ವಾಹನದ ಮೇಲೆ ನಡೆದ ದಾಳಿ, ಸೋನ್‌ಮಾರ್ಗ್ ಸಮೀಪ ಕಟ್ಟಡ ಕಾರ್ಮಿಕರ ಮೇಲೆ ನಡೆದ ದಾಳಿ ಹಾಗೂ ಬೋಟಾ ಪಥ್ರಿಯಲ್ಲಿ ಸೇನೆಯ ಮೇಲೆ ನಡೆಸಿದ ದಾಳಿಯಲ್ಲಿ ಈತ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ.
'ಉಗ್ರರ ಚಲನವಲನ ಕುರಿತ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಬುಡ್ಗಾಂನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಉಗ್ರರು ಸೇನಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಬಳಿಕ ಉಗ್ರರು ಹಾಗೂ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಉಗ್ರನೊಬ್ಬ ಮೃತಪಟ್ಟಿದ್ದಾನೆ' ಎಂದು ಚಿನಾರ್ ಕಾರ್ಪ್ಸ್ 'ಎಕ್ಸ್'ನಲ್ಲಿ ತಿಳಿಸಿದೆ.
ನೈಸರ್ಗಿಕ ಗುಹೆಯಲ್ಲಿ ಅಡಗಿಕುಳಿತಿರುವ ಇನ್ನೊಬ್ಬ ಉಗ್ರನಿಗಾಗಿ ಶೋಧ ನಡೆಸಲಾಗುತ್ತಿದೆ.

