ನವದೆಹಲಿ: 'ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು 'ದೇಶ ಮೊದಲು'ಎನ್ನುವ ಭಾವನೆಯೊಂದಿಗೆ ಮುನ್ನಡೆಯುವ ವಿದ್ಯಾರ್ಥಿಗಳ ಪೀಳಿಗೆಯನ್ನು ರೂಪಿಸಿ' ಎಂದು ಶಿಕ್ಷಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ.
ಶಿಕ್ಷಕರ ದಿನದ ಅಂಗವಾಗಿ ಶನಿವಾರ ಅವರು ಲೇಖನವೊಂದನ್ನು ಬರೆದಿದ್ದು, 'ವಿದ್ಯಾರ್ಥಿಗಳು ಒಳ್ಳೆಯ ಮನುಷ್ಯರಾಗಲು ಮಾರ್ಗದರ್ಶನ ನೀಡುವ ಶಿಕ್ಷಕರ ಕೆಲಸ ಅತ್ಯಂತ ಪವಿತ್ರ ಕೆಲಸ' ಎಂದು ಶ್ಲಾಘಿಸಿದ್ದಾರೆ.
'ತಮ್ಮ ಆಲೋಚನೆ ಮತ್ತು ಕೆಲಸಗಳಲ್ಲಿ ನೈತಿಕತೆಯನ್ನು ಕಾಯ್ದುಕೊಳ್ಳುತ್ತಾ, ಸಮೃದ್ಧಿ ಮತ್ತು ಕೀರ್ತಿಯನ್ನು ಗಳಿಸುವ ವಿದ್ಯಾರ್ಥಿಗಳೇ ಶಿಕ್ಷಕರ ಯಶಸ್ಸಿನ ಸಂಕೇತ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ದೇಶವು ಅಭಿವೃದ್ಧಿ ಹೊಂದಿದ ದೇಶವಾಗಲು ದಾಪುಗಾಲಿಡುತ್ತಾ ಮುನ್ನುಗ್ಗುತ್ತಿದೆ. ಈ ಹಾದಿಯಲ್ಲಿ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನುಗೌರವಿಸುವ, ವೈಜ್ಞಾನಿಕ ದೃಷ್ಟಿಕೋನ ಇರುವ ಮತ್ತು ಒಳಿತಿಗಾಗಿ ಕೆಲಸ ಮಾಡುವ ವಿದ್ಯಾರ್ಥಿಗಳ ಪೀಳಿಗೆಯನ್ನು ಶಿಕ್ಷಕರು ರೂಪಿಸಬೇಕು' ಎಂದು ಹೇಳಿದ್ದಾರೆ.
'ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ ಎಂದು ಭಾವಿಸಿ ಪೋಷಕರು ಶಾಲೆಗೆ ಕಳಿಸುತ್ತಾರೆ. ಈ ನಂಬಿಕೆಯನ್ನು ಎತ್ತಿಹಿಡಿಯುವುದು ಶಿಕ್ಷಕರ ಧರ್ಮ' ಎಂದು ತಿಳಿಸಿದ್ದಾರೆ.
ವ್ಯಸನದ ಮೇಲೆ ನಿಗಾ ಇಡಿ: ಮೋದಿ
ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ವ್ಯಸನ ವ್ಯಾಪಕವಾಗಿದ್ದು, ಅದರ ಮೇಲೆ ಶಿಕ್ಷಕರು ನಿಗಾ ಇಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.
ಮಕ್ಕಳನ್ನು ಕ್ರೀಡೆ, ದೈಹಿಕ ಆಟಗಳು ಮತ್ತು ಸೃಜನಶೀಲ ಚಟುವಟಿಕೆಗಳತ್ತ ಆಕರ್ಷಿಸಿ, ಅವರ ಮೊಬೈಲ್ ಮತ್ತು ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಬೇಕು ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಶುಕ್ರವಾರ ಸಂವಾದ ನಡೆಸಿದರು.
'ಸಮಾನ, ಗುಣಮಟ್ಟದ ಶಿಕ್ಷಣ ಬೇಕಿದೆ'
ನವದೆಹಲಿ (ಪಿಟಿಐ): ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶಗಳು ಮತ್ತು ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತಹ ವ್ಯವಸ್ಥೆಯನ್ನು ನಿರ್ಮಿಸಿ ಎಂದು ಶಿಕ್ಷಕರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಕರೆನೀಡಿದ್ದಾರೆ.
'ಜ್ಞಾನ, ಸೇವೆ ಮತ್ತು ಸಮರ್ಪಣೆ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತೀರಿ. ಮುಂಬರುವ ಪೀಳಿಗೆಗಳಿಗೆ ದಿಕ್ಕು ತೋರಿಸುತ್ತೀರಿ. ನಿಮ್ಮ ಈ ಕೊಡುಗೆಗೆ ಬೆಲೆಕಟ್ಟಲಾಗದು' ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

