ಕಾಸರಗೋಡು: ಜಿಲ್ಲೆಯಲ್ಲಿ ಅತ್ಯಂತ ವೈಭವಯುತವಾಗಿ ನಡೆಯುವ ಮುಳಿಯಾರ್ ಬಾಲಗೋಕುಲದ ನೇತೃತ್ವದ ಶೋಭಾಯಾತ್ರೆ ಶುಕ್ರವಾರ ಸಂಪನ್ನಗೊಂಡಿತು. ಬೋವಿಕ್ಕಾನಂನಲ್ಲಿ ನಡೆದ ಸಮಾರಂಭದಲ್ಲಿ ಧಾರ್ಮಿಕ ಸಭೆಯೊಂದಿಗೆ ಶೋಭಾಯಾತ್ರೆ ಆಯೋಜಿಸಲಾಯಿತು.
ವಿವಿಧ ಪ್ರದೇಶಗಳಿಂದ ಆಗಮಿಸಿದ ಶೋಭಾಯಾತ್ರೆ ಬೋವಿಕ್ಕಾನ ನಗರದಲ್ಲಿ ಸಮಾಗಮಗೊಂಡು, ನಂತರ ಕಾಲ್ನಡಿಗೆ ಮೂಲಕ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ಬಾಲಗೋಕುಲದ ನೇತೃತ್ವದಲ್ಲಿ ಉದುಮ ವಲಯದ ಶಂಭುನಾಡ್, ಪರವನಡ್ಕ ತಲಕ್ಕಾಯಿ, ವಯಲಾಂಕುಳಿ, ಕುನ್ನುಮ್ಮಲ್, ಅರಮಂಗಾನಂ, ಪಳ್ಳಿಪ್ಪುರಂ, ಕೀರ್ಯೂರ್, ಉದುಮ, ತಚ್ಚಂಗಾಡ್, ಆರೋಳ್, ಪುಳಿನಾಕ್ಷಿ, ಪೆರ್ದೊಚ್ಚು, ಕುಂಡಂಕುಳಿ, ಕುಟ್ಟಿಕೋಲ್ ಹಾಗೂ ಬಂದಡ್ಕ ಸೇರಿದಂತೆ 16 ಕೇಂದ್ರಗಳಿಂದ ವೈಭವೋಪೇತ ಶೋಭಾಯಾತ್ರೆ ಬೋವಿಕ್ಕಾಣದಲ್ಲಿ ಸಮಾಗಮಗೊಂಡಿತ್ತು.
ಮುದ್ದು ಕೃಷ್ಣನ ವೇಷ ತೊಟ್ಟ ಪುಟಾಣಿಗಳು, ಗೋಪಿಕೆಯರಾಗಿ ಮಿಂಚಿದ ಬಾಲಕಿಯರು, ಪುರಾಣ ಪಾತ್ರಗಳ ವೇಷಧಾರಿಗಳು ಹಾಗೂ ಸ್ತಬ್ಧಚಿತ್ರಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿದವು. ಕೃಷ್ಣನಾಮ ಜಪದೊಂದಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಶೋಭಾಯಾತ್ರೆಯುದ್ಧಕ್ಕೂ ಗೋಪಿಕಾ ನೃತ್ಯ, ಉರಿಯಡಿ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಸ್ತಬ್ಧ ಚಿತ್ರಗಳು ಜನಮನ ಸೆಳೆದವು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆದ ವಿವಿಧ ಮಹಾಶೋಭಾಯಾತ್ರೆಗಳು ಭಕ್ತರ ಸಮಾಗಮಕ್ಕೆ ಸಾಕ್ಷಿಯಾದವು. ಬಾಲಕೃಷ್ಣನ ವೇಷಧಾರಿಗಳೊಂದಿಗೆ ಸಾಗಿದ ಮೆರವಣಿಗೆಗಳು ಎಲ್ಲೆಡೆ ಹಬ್ಬದ ಕಳೆ ಮೂಡಿಸಿತ್ತು
.




