ನವದೆಹಲಿ: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧ ಹಿಂದುತ್ವ ಇನ್‌ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರನ್ನು ದೆಹಲಿ ನ್ಯಾಯಾಲಯವು 1 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಹಲ್ಲೆ ಪ್ರಕರಣ ಸಂಬಂಧ ಭಾರದ್ವಾಜ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರು ಶುಕ್ರವಾರ ಸಂಸತ್ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಎದುರು ಧರಣಿ ನಡೆಸಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ, ಭಾರದ್ವಾಜ್‌ನನ್ನು ಬುಲಂದ್‌ಶಹರ್‌ನಲ್ಲಿ ಪೊಲೀಸರು ಬಂಧಿಸಿದ್ದರು.
ಜುಲೈನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ನಿಶು ಆಜಾದ್ ತಂದೆ ಸಂಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾಗಿ 24 ವರ್ಷದ ಭಾರದ್ವಾಜ್ ಅವರು ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
'ಅವರ ತಲೆಬುರುಡೆ ಒಡೆದಿದ್ದೆ. ಇದರಿಂದಾಗಿ ಅವರಿಗೆ 60 ಹೊಲಿಗೆಗಳು ಬಿದ್ದಿದ್ದವು. ಆದರೂ ನಾನು ಜೈಲಿಗೆ ಹೋಗುವುದರಿಂದ ಪಾರಾಗಿದ್ದೇನೆ' ಎಂದಿದ್ದರು.
ಇದೀಗ ಭಾರದ್ವಾಜ್ ವಿರುದ್ಧ ಪೋಕ್ಸೊ, ಕೊಲೆ ಯತ್ನ, ಕ್ರಿಮಿನಲ್ ಬೆದರಿಕೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

