ವಿಶ್ವಸಂಸ್ಥೆ: ಆಫ್ರಿಕಾ ಖಂಡದ ನೈಜ ಭೌಗೋಳಿಕ ಗಾತ್ರವನ್ನು ಹೆಚ್ಚು ನಿಖರವಾಗಿ ತೋರಿಸುವ ಹೊಸ ಭೂಪಟ ಬಳಕೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಬೆಂಬಲ ವ್ಯಕ್ತಪಡಿಸಿದೆ. 'ಕರೆಕ್ಟ್ ದಿ ಮ್ಯಾಪ್' ನಿರ್ಣಯಕ್ಕೆ 164 ದೇಶಗಳು ಬೆಂಬಲ ಸೂಚಿಸಿವೆ.
ಭಾರತ, ಫ್ರಾನ್ಸ್, ಬ್ರಿಟನ್ ಸೇರಿದಂತೆ 164 ರಾಷ್ಟ್ರಗಳು ನಿರ್ಣಯದ ಪರ ಮತ ಹಾಕಿದರೆ, ಅಮೆರಿಕ ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದೆ . ಆರು ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.
ಮತದಾನಕ್ಕೂ ಮುನ್ನ ಮಾತನಾಡಿದ ಟೋಗೊದ ವಿದೇಶಾಂಗ ಸಚಿವ ರಾಬರ್ಟ್ ಡುಸ್ಸಿ, 'ನ್ಯಾಯಯುತ ಜಗತ್ತು ನ್ಯಾಯಯುತ ನಕ್ಷೆಯಿಂದ ಆರಂಭವಾಗುತ್ತದೆ' ಎಂದು ಹೇಳಿದ್ದಾರೆ.
'ನಕ್ಷೆ ತಟಸ್ಥವಲ್ಲ. ಜಗತ್ತಿನ ಜನರು, ದೇಶಗಳು ಮತ್ತು ಖಂಡಗಳ ಸ್ಥಾನಮಾನವನ್ನು ನಾವು ಹೇಗೆ ಅರ್ಥೈಸಿಕೊಳ್ಳುತ್ತೇವೆ ಎಂಬುದರ ಮೇಲೆ ಅದು ಪ್ರಭಾವ ಬೀರುತ್ತದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಏಕೆ ಬದಲಾವಣೆ?
16ನೇ ಶತಮಾನದಿಂದ ಬಳಕೆಯಲ್ಲಿರುವ ಮರ್ಕೇಟರ್ ನಕ್ಷೆಯಲ್ಲಿ ಭೂಮಿಯ ವಿವಿಧ ಭಾಗಗಳ ಗಾತ್ರ ನೈಜ ಪ್ರಮಾಣದಲ್ಲಿ ಕಾಣಿಸುವುದಿಲ್ಲ. ವಿಶೇಷವಾಗಿ ಸಮಭಾಜಕ ರೇಖೆಯ ಸಮೀಪದ ಪ್ರದೇಶಗಳು ಚಿಕ್ಕದಾಗಿ ಹಾಗೂ ಧ್ರುವ ಪ್ರದೇಶಗಳು ದೊಡ್ಡದಾಗಿ ಕಾಣಿಸುತ್ತವೆ.
ಇದರಿಂದಾಗಿ ಆಫ್ರಿಕಾ ಖಂಡದ ವಾಸ್ತವಿಕ ಗಾತ್ರವನ್ನು ಕಡಿಮೆ ಅಂದಾಜಿಸುವಂತಾಗಿದೆ ಎಂಬುದು ಆಫ್ರಿಕನ್ ಯೂನಿಯನ್ ಸದಸ್ಯ ರಾಷ್ಟ್ರಗಳ ವಾದವಾಗಿದೆ.
ಗ್ರೀನ್‌ಲ್ಯಾಂಡ್‌ಗಿಂತ ಆಫ್ರಿಕಾ ಸುಮಾರು 14 ಪಟ್ಟು ದೊಡ್ಡದಾಗಿದ್ದರೂ, ಮರ್ಕೇಟರ್ ನಕ್ಷೆಯಲ್ಲಿ ಎರಡೂ ಪ್ರದೇಶಗಳು ಬಹುತೇಕ ಒಂದೇ ಗಾತ್ರದಂತೆ ಕಾಣುತ್ತವೆ ಎಂದು ಅವು ಹೇಳಿವೆ.
1569ರಲ್ಲಿ ನಕ್ಷೆ ತಜ್ಞ ಗೆರಾರ್ಡಸ್ ಮರ್ಕೇಟರ್ ಈ ನಕ್ಷೆಯನ್ನು ರೂಪಿಸಿದ್ದರು.

