ವಾಷಿಂಗ್ಟನ್: ಇರಾನ್‌ನ ಪಿಕ್‌ಆಯಕ್ಸ್ ಪರ್ವತದಲ್ಲಿರುವ ಭೂಗತ ಪರಮಾಣು ಸಂಕೀರ್ಣದ ಮೇಲೆ ಶೀಘ್ರದಲ್ಲೇ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಆ ತಾಣದಲ್ಲಿನ ಚಟುವಟಿಕೆಗಳನ್ನು ಅಮೆರಿಕ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದೂ ಅವರು ಹೇಳಿದ್ದಾರೆ.
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, 'ಆ ತಾಣದಲ್ಲಿ ನಡೆಯುತ್ತಿರುವ ಚಲನವಲನಗಳ ಬಗ್ಗೆ ನಮ್ಮ ಬಳಿ ವಿವರವಾದ ಮಾಹಿತಿಯಿದೆ. ಆತಂಕ ಹುಟ್ಟಿಸುವ ಯಾವುದೇ ಬೆಳವಣಿಗೆ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.
'ಪಿಕ್‌ಆಯಕ್ಸ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿದಿದೆ. ಇರಾನ್‌ನಾದ್ಯಂತ ನಡೆಯುತ್ತಿರುವ ಬೆಳವಣಿಗೆಗಳು, ಯಾರು ಎಲ್ಲಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿಯೂ ನಮ್ಮ ಬಳಿ ಇದೆ. ಏನಾದರೂ ಅನಾಹುತ ಸಂಭವಿಸಿದರೆ ನಾವು ಕಠಿಣ ಪ್ರತಿಕ್ರಿಯೆ ನೀಡುತ್ತೇವೆ' ಎಂದು ಅವರು ಎಚ್ಚರಿಸಿದ್ದಾರೆ.
ಇದೇ ವೇಳೆ ಇರಾನ್ ವಿರುದ್ಧದ ಸೇನಾ ಕ್ರಮವನ್ನು ಸಮರ್ಥಿಸಿಕೊಂಡ ಟ್ರಂಪ್, 'ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯುವುದೇ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿತ್ತು' ಎಂದು ತಿಳಿಸಿದ್ದಾರೆ.
'ಯುದ್ಧ ಆರಂಭವಾಗಿ ಐದು ತಿಂಗಳು ಕಳೆದಿವೆ. ಐದು ತಿಂಗಳಲ್ಲಿ ನಾವು ಏನು ಮಾಡಿದ್ದೇವೆ ಗೊತ್ತೇ? ಅವರು ಪರಮಾಣು ಆಯುಧವನ್ನು ಹೊಂದುವುದನ್ನು ತಡೆದಿದ್ದೇವೆ. ನಾವು ಏನು ಅಂದುಕೊಂಡಿದ್ದೇವೋ ಅದನ್ನೇ ಸಾಧಿಸಿದ್ದೇವೆ' ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್‌ನ ಇಸ್ಫಹಾನ್ ಪ್ರಾಂತ್ಯದಲ್ಲಿರುವ ನತಾಂಜ್ ಯುರೇನಿಯಂ ಸಂವರ್ಧನಾ ಘಟಕದ ಸಮೀಪದ ಪಿಕ್‌ಆಕ್ಸ್ ಪರ್ವತದಲ್ಲಿ ಭೂಗತ ಸಂಕೀರ್ಣವೊಂದು ನಿರ್ಮಾಣವಾಗುತ್ತಿದೆ. ಎರಡು ಸುರಂಗ ವ್ಯವಸ್ಥೆಗಳನ್ನು ಹೊಂದಿರುವ ಈ ಸಂಕೀರ್ಣದ ಕೆಲವು ಭಾಗಗಳು ಭೂಮಿಯ ಮೇಲ್ಮೈಯಿಂದ 100 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿವೆ ಎಂದು ಉಪಗ್ರಹ ಚಿತ್ರಗಳ ವಿಶ್ಲೇಷಣೆ ನಡೆಸಿರುವ 'ಇನ್‌ಸ್ಟಿಟ್ಯೂಟ್ ಫಾರ್ ಸೈನ್ಸ್ ಅಂಡ್ ಇಂಟರ್‌ನ್ಯಾಷನಲ್ ಸೆಕ್ಯುರಿಟಿ' (ISIS) ಅಂದಾಜಿಸಿದೆ.
2020ರಲ್ಲಿ ನತಾಂಜ್‌ನ ಮೇಲ್ಮೈಯಲ್ಲಿದ್ದ ಸುಧಾರಿತ ಸೆಂಟ್ರಿಫ್ಯೂಜ್‌ಗಳ ಜೋಡಣೆ ಘಟಕದಲ್ಲಿ ಸ್ಫೋಟ ಸಂಭವಿಸಿ ಹಾನಿಯಾಗಿತ್ತು. ಇದರ ಬಳಿಕ ಪಿಕ್‌ಆಕ್ಸ್ ಪರ್ವತದೊಳಗೆ ಈ ಭೂಗತ ಸಂಕೀರ್ಣದ ನಿರ್ಮಾಣ ಆರಂಭವಾಯಿತು.
ವೈಮಾನಿಕ ದಾಳಿಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಪರ್ವತದೊಳಗೆ ಭೂಗತ ಸಂಕೀರ್ಣಗಳನ್ನು ಇರಾನ್ ನಿರ್ಮಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

