ಟೆಹರಾನ್: ಹೊರ್ಮುಜ್ ಜಲಸಂಧಿ ಬಳಿಯಿರುವ ಪ್ರಮುಖ ತೈಲ ಕೇಂದ್ರವಾದ ಖರ್ಗ್ ದ್ವೀಪದ ಸಮೀಪದಲ್ಲಿ ಹಲವು ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಮಾಧ್ಯಮಗಳು ಶನಿವಾರ(ಸೆ.5) ವರದಿ ಮಾಡಿವೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಮರಳಿ ಆರಂಭವಾದ ಬಳಿಕ ಈ ಘಟನೆ ನಡೆದಿದೆ.
ಈ ಕುರಿತು ವರದಿ ಮಾಡಿರುವ ಫಾರ್ಸ್ ಸುದ್ದಿ ಸಂಸ್ಥೆಯು, ನಮ್ಮ ಪ್ರತಿನಿಧಿಗೆ ಸ್ಫೋಟದ ಸದ್ದು ಕೇಳಿಸಿದೆ. ಆದರೆ, ಸ್ಥಳದಲ್ಲಿ ಹೊಗೆ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದೆ.
ಮತ್ತೊಂದು ಸುದ್ದಿ ಸಂಸ್ಥೆ ಸಿಎನ್‌ಎನ್, 'ಅಮೆರಿಕವು ಇರಾನ್‌ನ ಟ್ಯಾಂಕರ್ ಅನ್ನು ಗುರಿಯಾಗಿಸಿ ದಾಳಿ ಮಾಡಿದೆ' ಎಂದು ವರದಿ ಮಾಡಿದೆ.
ಆದರೆ, ಅಮೆರಿಕ ಮತ್ತು ಇರಾನ್‌ನ ಅಧಿಕಾರಿಗಳು ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡಿದ ಬಳಿಕ ಆರಂಭವಾದ ಪಶ್ಚಿಮ ಏಷ್ಯಾ ಸಂಘರ್ಷವು, ಕಳೆದ ಆರು ತಿಂಗಳಿನಿಂದ ನಡೆಯುತ್ತಿದೆ.
ಉಭಯ ದೇಶಗಳ ನಡುವಿನ ಕದನ ವಿರಾಮ ಒಪ್ಪಂದ ವಿಫಲವಾದ ನಂತರ, ಟೆಹರಾನ್‌ನಲ್ಲಿನ ಮದುವೆಯೊಂದರ ಮೇಲೆ ಅಮೆರಿಕ ದಾಳಿ ಮಾಡಿತ್ತು. ಘಟನೆಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ವಕ್ತಾರರು ಹೇಳಿದ್ದರು. ಅದರ ನಂತರ ಕುವೈತ್ ಮತ್ತು ಯುಎಇ ಅಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸುತ್ತಿದೆ.

