ನವದೆಹಲಿ (PTI): ಸೆಪ್ಟೆಂಬರ್ 28ರಿಂದ ಮೂರು ದಿನ ಯುಎಫ್‌ಬಿ ಬ್ಯಾಂಕ್ ನೌಕರರ ಒಕ್ಕೂಟವು ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಸೆ. 27(ಭಾನುವಾರ)ವೂ ಬ್ಯಾಂಕುಗಳನ್ನು ತೆರೆಯಲು ಸರ್ಕಾರ ಆದೇಶ ನೀಡಿದೆ.
ಸೆಪ್ಟೆಂಬರ್ ಕೊನೆಯಲ್ಲಿ ಬ್ಯಾಂಕುಗಳಿಗೆ ಆರು ತಿಂಗಳ ಆರ್ಥಿಕ ಲೆಕ್ಕಪತ್ರಗಳನ್ನು ಮುಕ್ತಾಯಗೊಳಿಸುವ ಸಮಯವಾಗಿರುತ್ತದೆ.
ಈ ವೇಳೆ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರೆ ಬ್ಯಾಂಕಿಂಗ್ ಕಾರ್ಯಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಾ ಸರ್ಕಾರಿ ಬ್ಯಾಂಕ್‌ಗಳಿಗೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಎಲ್ಲಾ ಬ್ಯಾಂಕ್ ಶಾಖೆಗಳಿಗೆ, ಕಚೇರಿಗಳಿಗೆ, ಎಟಿಎಂ-ಲಿಂಕ್ ಶಾಖೆಗಳಿಗೆ ಸೆ. 27(ಭಾನುವಾರ)ದಂದು ಕಾರ್ಯನಿರ್ವಹಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮುಷ್ಕರವನ್ನು ಕೈಬಿಡುವಂತೆ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಬ್ಯಾಂಕ್ ಒಕ್ಕೂಟಗಳಿಗೆ ವಿನಂತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಂಚಣಿಯಲ್ಲಿ ಹೆಚ್ಚಳ, ಎಲ್ಲ ಪಿಂಚಣಿದಾರರಿಗೆ ಸಮಾನವಾಗಿ ಅನ್ವಯವಾಗುವ ತುಟ್ಟಿಭತ್ಯೆ ಸೂತ್ರ, ಎನ್‌ಪಿಎಸ್ ವ್ಯಾಪ್ತಿಯಲ್ಲಿ ಇರುವ ನೌಕರರಿಗೆ ಒಪಿಎಸ್‌ಗೆ ವರ್ಗಾವಣೆ ಆಗಲು ಅವಕಾಶ ಕಲ್ಪಿಸಬೇಕು ಎಂಬುದು ಯುಎಫ್‌ಬಿಯು ಮುಂದಿರಿಸಿರುವ ಇತರ ಬೇಡಿಕೆಗಳು.

