ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯಾಗಿದ್ದ ಯಶವಂತ ವರ್ಮಾ ಅವರ ಮನೆಯಲ್ಲಿ ಅರೆ ಸುಟ್ಟ ನೋಟುಗಳ ರಾಶಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಕೆಯಾಗಿದೆ.
ವಕೀಲ ಮ್ಯಾಥ್ಯೂಸ್ ನೆಡುಂಪರ ಅವರು ವರ್ಮಾ ವಿರುದ್ಧ ಹೊಸ ಅರ್ಜಿಯನ್ನು ಸಲ್ಲಿಸಿದ್ದು, ಬುಧವಾರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ, ವಿ.ಮೋಹನಾ ಅವರನ್ನು ಒಳಗೊಂಡ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕೆಂದು ಮನವಿ ಮಾಡಿದರು.
'ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಈ ವಿಷಯವನ್ನು ಪಟ್ಟಿ ಮಾಡಲು ನಿರಾಕರಿಸುತ್ತಿದೆ. ನೀವೂ ಈ ಅರ್ಜಿಯನ್ನು ವಜಾಗೊಳಿಸಬಹುದು. ಆದರೆ, ರಿಜಿಸ್ಟ್ರಿ ಸಂಖ್ಯೆಯನ್ನು ನೀಡಿ, ಅರ್ಜಿಯನ್ನು ಪಟ್ಟಿ ಮಾಡಿ' ಎಂದು ಕೋರಿದರು.
ನ್ಯಾಯಪೀಠದ ಮುಂದೆ ಖುದ್ದಾಗಿ ಹಾಜರಾದ ಇನ್ನೊಬ್ಬ ಅರ್ಜಿದಾರರು, 'ವರ್ಮಾ ವಿರುದ್ಧದ ಆರೋಪಗಳು ಲೋಕಸಭಾ ಸ್ಪೀಕರ್ ರಚಿಸಿದ್ದ ವಿಚಾರಣಾ ಸಮಿತಿಯಿಂದ ಸಾಬೀತಾಗಿವೆ. ಹೀಗಾಗಿ, ಎಫ್‌ಐಆರ್ ದಾಖಲಿಸುವಲ್ಲಿ ಯಾವುದೇ ಅಡೆತಡೆಗಳು ಇರಬಾರದು. ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸುವ ಅಧಿಕಾರವು ಈ ನ್ಯಾಯಾಲಯಕ್ಕೆ ಇದೆ' ಎಂದು ಮನವಿ ಮಾಡಿದರು.
ಆದರೆ, ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.

