ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿರುವ ನಡುವೆಯೇ, ಕುಮಾರ್ ಅವರ ಪುತ್ರಿ ಹಾಗೂ ಗೌತಮ್ ಬುದ್ಧ ನಗರ (ನೋಯ್ಡಾ) ಜಿಲ್ಲಾಧಿಕಾರಿ ಮೇಧಾ ರೂಪಂ ಅವರ ವಿವಾದ ಮುನ್ನೆಲೆಗೆ ಬಂದಿದೆ.
ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಮೇಧಾ ರೂಪಂ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು 'ಪಟ್ಟಿ' ಮಾಡಿದ ವಿಧಾನದ ಕುರಿತು ವಕೀಲರ ಸಂಘವೊಂದು ಆಕ್ಷೇಪ ವ್ಯಕ್ತಪಡಿಸಿದೆ.
ಈ ಪ್ರಕರಣವು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಾಗೂ ಹೋರಾಟಗಾರ್ತಿ ಆಕೃತಿ ಚೌಧರಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿರುವುದಕ್ಕೆ ಸಂಬಂಧಿಸಿದೆ.
ಏಪ್ರಿಲ್‌ನಲ್ಲಿ ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಯ ಸಂದರ್ಭದಲ್ಲಿ ಆಕೃತಿ ಚೌಧರಿ ಅವರನ್ನು ಬಂಧಿಸಲಾಗಿತ್ತು. ಎನ್‌ಎಸ್‌ಎ ಕಾಯ್ದೆಯಡಿ ಚೌಧರಿ ಅವರನ್ನು ಬಂಧಿಸುವ ಆದೇಶಕ್ಕೆ ರೂಪಂ ಸಹಿ ಹಾಕಿದ್ದರು.
ಸೆಪ್ಟೆಂಬರ್ 2ರಂದು, ಚೌಧರಿ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಮಾನ್ಯ ಮಾಡಿದ್ದ ಅಲಹಾಬಾದ್ ಹೈಕೋರ್ಟ್, ಚೌಧರಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಈ ವೇಳೆ ಜಿಲ್ಲಾಧಿಕಾರಿ ರೂಪಂ ಅವರು ಬಂಧನದ ಆದೇಶವನ್ನು ಜಾರಿಗೊಳಿಸಿದ ರೀತಿಯನ್ನು ಹೈಕೋರ್ಟ್ ಕಟುವಾಗಿ ಟೀಕಿಸಿತ್ತು. ಚೌಧರಿ ಅವರಿಗೆ ₹5 ಲಕ್ಷ ಪರಿಹಾರ ನೀಡಬೇಕು. ಈ ಮೊತ್ತವನ್ನು ಜಿಲ್ಲಾಧಿಕಾರಿ ಮತ್ತು ಇತರ ಪೊಲೀಸ್ ಅಧಿಕಾರಿಗಳ ಸಂಬಳದಿಂದ ವಸೂಲಿ ಮಾಡುವಂತೆ ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರೂಪಂ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆರಂಭದಲ್ಲಿ ಈ ಪ್ರಕರಣವನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಪೀಠಕ್ಕೆ ಹಂಚಿಕೆ ಮಾಡಲಾಗಿತ್ತು. ಬಳಿಕ ಅದನ್ನು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಯಿತು.
ಆಕ್ಷೇಪವೇನು?
ರೂಪಂ ಅವರ ಪ್ರಕರಣವನ್ನು ವಿಸ್ಕೃತ ಪೀಠಕ್ಕೆ ಹಂಚಿಕೆ ಮಾಡದೆ, ಸತೀಶ್ ಚಂದ್ರ ಶರ್ಮಾ ಅವರ ಪೀಠಕ್ಕೆ ಪಟ್ಟಿ ಮಾಡಿರುವುದಕ್ಕೆ ವಕೀಲರ ಸಂಘ 'ಲಾಯರ್ಸ್ ಅಸೋಸಿಯೇಷನ್ ಫಾರ್ ಕಾನ್‌ಸ್ಟಿಟ್ಯೂಷನ್' (ಎಲ್‌ಎಎಫ್‌ಸಿ) ಆಕ್ಷೇಪ ವ್ಯಕ್ತಪಡಿಸಿದೆ ಎಂದು 'ಲೈವ್ ಲಾ' ವರದಿ ಮಾಡಿದೆ.
ವಿವಾದದ ಕುರಿತಂತೆ ಪ್ರತಿಕ್ರಿಯಿಸಿರುವ ವಕೀಲರ ಸಂಘ, 'ಅರ್ಜಿಯ ವಿಚಾರಣೆಯನ್ನು ಸತೀಶ್ ಚಂದ್ರ ಶರ್ಮಾ ಅವರ ಪೀಠ ನಡೆಸಲು ಕಾರಣವೇನು?' ಎಂದು ಪ್ರಶ್ನಿಸಿದೆ.
'ರೂಪಂ ಅವರು ಸಿಇಸಿ ಜ್ಞಾನೇಶ್ ಕುಮಾರ್ ಅವರ ಪುತ್ರಿಯಾಗಿರುವುದರಿಂದ ಅವರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಹಿರಿಯ ನಾಗರಿಕ ಸೇವಾ ಅಧಿಕಾರಿಗಳ ಕುಟುಂಬಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಇಂತಹ ವಿಶೇಷ ಆದ್ಯತೆ ನೀಡುವುದು ಸರಿಯಲ್ಲ' ಎಂದು ವಾದಿಸಿದೆ.

