ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ತೊಡಿಸುವ ಪವಿತ್ರ ಆಭರಣಗಳ ವಾಹಕ ತಂಡದ ಗುರುಸ್ವಾಮಿ ಕುಳತ್ತಿನಾಲ್ ಗಂಗಾಧರನ್ ಪಿಳ್ಳೆ (91) ನಿಧನರಾದರು. ತಮ್ಮ 18ನೇ ವಯಸ್ಸಿನಿಂದಲೇ ತಿರುವಾಭರಣ ವಾಹಕ ತಂಡದ ಸದಸ್ಯರಾಗಿದ್ದ ಅವರು, 21 ವರ್ಷಗಳ ಹಿಂದೆ ಗುರುಸ್ವಾಮಿಯಾಗಿ ನೇಮಕಗೊಂಡಿದ್ದರು. ಸತತ 68 ವರ್ಷಗಳ ಕಾಲ ಅಯ್ಯಪ್ಪನ ತಿರುವಾಭರಣಗಳನ್ನು ಪಂದಳ ಅರಮನೆಯಿಂದ ಪಾರಂಪರಿಕ ಕಾನನ ಹಾದಿ ಮೂಲಕ ಶಬರಿಮಲೆಗೆ ಕೊಂಡೊಯ್ಯುವ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 86ನೇ ವಯಸ್ಸಿನವರೆಗೂ ಈ ಸೇವೆಯನ್ನು ಮುಂದುವರಿಸಿದ್ದ ಇವರು, ಕಳೆದ ಕೆಲವು ವರ್ಷಗಳಿಂದ ವಿಶ್ರಾಂತಿಯಲ್ಲಿದ್ದರೂ, 2025ರವರೆಗೂ ಪಂದಳ ಅರಮನೆಯಿಂದ ತಿರುವಾಭರಣ ಪೆಟ್ಟಿಗೆಯನ್ನು ಸ್ವೀಕರಿಸಿ ಘೋಷಯಾತ್ರೆಯ ಮೂಲಕ ಶಬರಿಮಲೆಗೆ ತಲುಪಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು. ಇವರ ಪುತ್ರ ಕುಳತ್ತಿನಾಲ್ ಉಣ್ಣಿಕೃಷ್ಣನ್ ಕಳೆದ 36 ವರ್ಷಗಳಿಂದ ತಿರುವಾಭರಣ ತಂಡದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


