ಬದಿಯಡ್ಕ: ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಬದಿಯಡ್ಕ ಗ್ರಾಮಪಂಚಾಯಿತಿ ವನಿತಾ ಶಿಶು ವಿಕಸನ ವಿಭಾಗ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ 3 ರಿಂದ 6 ವರ್ಷ ಪ್ರಾಯದ ಮಕ್ಕಳ ಆರೋಗ್ಯ ಪರಿಶೀಲನೆಯ ಭಾಗವಾಗಿ ನೂರು ದಿನಗಳ ಯೋಜನೆಯ ಬಾಲ್ಯಸ್ಪಂದನಂ ಕಾರ್ಯಕ್ರಮದ ಉದ್ಘಾಟನೆ ಬದಿಯಡ್ಕ ಅಂಗನವಾಡಿಯಲ್ಲಿ ಜರಗಿತು.
ವಾರ್ಡು ಸದಸ್ಯೆ ಶಾಹಿನಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿ ಮಾತನಾಡಿ, ದೇಶದ ಭವಿಷ್ಯಕ್ಕೆ ಮಕ್ಕಳ ಸಬಲ ಮತ್ತು ಸುದೃಢ ಆರೋಗ್ಯವೇ ಮೂಲ ಅಡಿಪಾಯ. ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯಾಗಿದ್ದರೂ, ನವಜಾತ ಶಿಶುಗಳು ಹಾಗೂ ಐದು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ, ರೋಗನಿರೋಧಕ ಶಕ್ತಿಯ ಕೊರತೆ ಮತ್ತು ಋತುಮಾನದ ಸೋಂಕುಗಳು ಇಂದಿಗೂ ಪ್ರಮುಖ ಸವಾಲಾಗಿ ಉಳಿದಿವೆ ಎಂದರು.
ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಮಾತನಾಡಿ ಇತ್ತೀಚೆಗೆ ಹೆಚ್ಚುತ್ತಿರುವ ಮೊಬೈಲ್ ಸ್ಕ್ರೀನ್ ಸಮಯವನ್ನು ಕಡಿತಗೊಳಿಸಿ ಮಕ್ಕಳಲ್ಲಿ ಹೊರಾಂಗಣ ಆಟ ಮತ್ತು ಸೃಜನಶೀಲ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಮಕ್ಕಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯ. ಪ್ರತಿಯೊಂದು ಮಗುವಿಗೂ ಉತ್ತಮ ಆರೈಕೆ ಹಾಗೂ ಪೋಷಕಾಂಶ ಲಭಿಸಿದಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು. ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಐಸಿಡಿಎಸ್ ಸಂಚಾಲಕಿ ರಂಜಿನಿ, ಡಾ. ಸಿಸ್ಟರ್ ಇಥಾವ್, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಪಾಲಕರು ಪಾಲ್ಗೊಂಡಿದ್ದರು.

.jpg)
.jpg)
