ಬದಿಯಡ್ಕ: ಬಾಲಗೋಕುಲವು ಮಕ್ಕಳಲ್ಲಿ ಕುಸಿದು ಹೋಗುತ್ತಿರುವ ನೈತಿಕ ಮೌಲ್ಯಗಳ ವಿಕಾಸಕ್ಕಾಗಿ ನಿರಂತರ ಶ್ರಮಿಸುತ್ತಿರುವ ಮಹೋನ್ನತ ಸಂಘಟನೆ ಎಂದು ರಾ. ಸ್ವ. ಸಂಘದ ಬದಿಯಡ್ಕ ಖಂಡ್ ಸಂಘಚಾಲಕ್ ರಮೇಶ ಕಳೇರಿ ಬೇಳ ಹೇಳಿದರು.
ಅವರು ನೀರ್ಚಾಲು ಸಮೀಪದ ಏಣಿಯರ್ಪು ಹನುಮಾನ್ ನಗರದ ಶ್ರೀ ವೀರಾಂಜನೇಯ ಬಾಲಗೋಕುಲ ಹಾಗೂ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ವತಿಯಿಂದ ಏಣಿಯರ್ಪು ವ್ಯಾಯಾಮ ಶಾಲೆಯಲ್ಲಿ ನಡೆದ 23ನೇ ವರ್ಷದ ಜನ್ಮಾಷ್ಟಮಿ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ನೈತಿಕತೆ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಸಂಸ್ಕಾರವಂತ ಪ್ರಜೆಗಳ ನಿರ್ಮಾಣ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಆಗಲಿದೆ. ಮಕ್ಕಳನ್ನು ಬಾಲಗೋಕುಲ ತರಗತಿಗೆ ಕಳಿಸಿ ಎಂದು ಅವರು ಹೆತ್ತವರಿಗೆ ಕರೆಯಿತ್ತರು.
ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಜೀವವಿಮಾ ನಿಗಮದ ಅಧಿಕಾರಿ ರಾಮಕೃಷ್ಣ ಸಿ.ಎಚ್. ಏಣಿಯರ್ಪು ಇಂತಹ ಉತ್ಸವಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಆ ಭಗವಂತನ ಜೀವನಾದರ್ಶವನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಲಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಏಣಿಯರ್ಪು ಸ್ವಾಗತಿಸಿ, ಬಾಲಗೋಕುಲದ ಶಿಕ್ಷಕಿ ಹಾಗೂ ಮಾತೃಸಮಿತಿ ಕಾರ್ಯದರ್ಶಿ ಐಶ್ವರ್ಯ ರಾಜೇಶ್ ವಂದಿಸಿದರು. ಸರಿತಾ ಟೀಚರ್ ನಿರೂಪಿಸಿದರು. ಅಪರಾಹ್ನ ನಡೆದ ಸಮಾರೋಪ ಸಭೆಯನ್ನು ಬದಿಯಡ್ಕ ಪಂಚಾಯಿತಿ ಸದಸ್ಯೆ ಅಶ್ವತಿ ಅಶೋಕನ್ ಉದ್ಘಾಟಿಸಿದರು. ಸಮಿತಿಯ ಪದಾಧಿಕಾರಿ ಲೋಹಿತ್ ಏಣಿಯರ್ಪು ಸ್ವಾಗತಿಸಿ, ಜಯಕರ ಕಾಮತ್ ವಂದಿಸಿದರು. ಬೆಳಗ್ಗೆ ಗೋಪೂಜೆಯೊಂದಿಗೆ ಆರಂಭಗೊಂಡು ವಿವಿಧ ಸ್ಪರ್ಧೆಗಳು, ಮಕ್ಕಳಿಂದ ನೃತ್ಯ ಪ್ರದರ್ಶನ ರಾತ್ರಿ ಭಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

.jpg)
.jpg)
