ಕಾಸರಗೋಡು: ಸಿಪಿಎಂನ ವಿಸ್ತೃತ ರಾಜ್ಯ ಸಮಿತಿ ಸಭೆ ಹಾಗೂ ಚುನಾವಣಾ ಫಲಿತಾಂಶದ ಪರಾಮರ್ಶೆ, ಕೇವಲ ತಮ್ಮ ಪಕ್ಷದ ಕಾರ್ಯಕರ್ತರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಪಕ್ಷದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ತಿಳಿಸಿದ್ದಾರೆ.
ಅವರು ಚೀಮೇನಿಯ ಟ್ರೀ ವುಡ್ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿಸಲಾಗಿದ್ದ 'ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ'ಬಿಜೆಪಿ ಜಿಲ್ಲಾ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ನೆಲಕಚ್ಚಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಕಾರ್ಯದರ್ಶಿ ಸ್ಥಾನದಿಂದ ಎಂ.ವಿ. ಗೋವಿಂದನ್ ಅವರನ್ನು ಬದಲಾಯಿಸಲು ಸಿಪಿಎಂ ಮುಂದಾಗದಿರುವುದು, ಪಕ್ಷವು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಅಧಿಕಾರಕ್ಕೇರಿದ ಕೇವಲ ಮೂರು ತಿಂಗಳಲ್ಲೇ ವಿ.ಡಿ. ಸತೀಶನ್ ನೇತೃತ್ವದ ಐಕ್ಯರಂಗ ಸರ್ಕಾರದ ವೈಫಲ್ಯ ಜಗಜ್ಜಾಹೀರಾಗಿದೆ. ಅಧಿಕಾರಕ್ಕೇರಿದ ಆರಂಭದಲ್ಲೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಗಿ ಬಂದಿರುವುದು ವಿಷಾದನೀಯ. ರಾಜ್ಯದಲ್ಲಿ ನಿಜವಾದ ವಿರೋಧ ಪಕ್ಷದ ಪಾತ್ರವನ್ನು ಬಿಜೆಪಿಯೇ ನಿರ್ವಹಿಸುತ್ತಿದೆ ಎಂದು ಅಬ್ದುಲ್ಲಕುಟ್ಟಿ ತಿಳಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರಕ್ಕೆ ಜಾಗತಿಕ ನಾಯಕರ ನಡುವೆ ಲಭಿಸುತ್ತಿರುವ ಮನ್ನಣೆ ಹಾಗೂ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಭಾರತ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಆಯೋಗದ ವಿರುದ್ಧ ವಿವಿಧ ಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿರುವ ಇತ್ತೀಚಿನ ಪ್ರತಿಭಟನೆಗಳೇ ಇದಕ್ಕೆ ನಿದರ್ಶನ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಹಿರಿಯ ನೇತಾರರನ್ನು ಎ.ಪಿ ಅಬ್ದುಲ್ಲಕುಟ್ಟಿ ಗೌರವಿಸಿದರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ ವೇಲಾಯುಧನ್, ವಕೀಲ ಕೆ. ಶ್ರೀಕಾಂತ್, ರಜ್ಯ ಸಮಿತಿ ಸದಸ್ಯ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ ಕೋಳಾರು, ರವೀಶ ತಂತ್ರಿ ಕುಂಟಾರು, ಪ್ರಮಿಳಾ ಸಿ.ನಾಯ್ಕ್, ಎ. ವೇಲಾಯುಧನ್, ರಾಜ್ಯ ಸಮಿತಿ ಸದಸ್ಯರಾದ ವಕೀಲ ರವೀಂದ್ರನ್, ರೂಪವಾಣಿ ಆರ್. ಭಟ್, ಹರೀಶ್ ನಾರಂಪಾಡಿಮೊದಲಾದವರು ಉಪಸ್ಥಿತರಿದ್ದರು.



