ಲಂಡನ್(PTI): ದೇಶಭ್ರಷ್ಟ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರವಾಲ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.
ಇಲ್ಲಿನ ಸೌತ್‌ವಾರ್ಕ್ ಕ್ರೌನ್ ಕೋರ್ಟ್ ನ್ಯಾಯಾಧೀಶ ನಥಾನಿಯಲ್ ರುಡಾಲ್ಫ್ ಮುಂದೆ ಅಗರವಾಲ್ ಅವರನ್ನು ಗುರುವಾರ ಹಾಜರುಪಡಿಸಲಾಯಿತು.
ವಿಚಾರಣೆ ವೇಳೆ, 'ಅಗರವಾಲ್ ವಿರುದ್ಧದ ಆರೋಪಗಳ ಕುರಿತು ಪೊಲೀಸರು ನಡೆಸುತ್ತಿರುವ ತನಿಖೆ ಸಂಕೀರ್ಣವಾಗಿದೆ. ಹೀಗಾಗಿ, ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಬೇಕು' ಎಂದು ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್(ಸಿಪಿಎಸ್) ವಕೀಲ ಆಲಿವರ್ ವೀಚ್ ಅವರು ನ್ಯಾಯಾಧೀಶರನ್ನು ಕೋರಿದರು.
'ಅಗರವಾಲ್ ಉತ್ತಮ ನಡತೆಯ ವ್ಯಕ್ತಿ. ಅವರ ವಿರುದ್ಧದ ಆರೋಪಗಳು, ಅವರ ಜಾಮೀನಿಗೆ ವ್ಯಕ್ತವಾದ ಆಕ್ಷೇಪಗಳ ಕುರಿತು ಲಿಖಿತ ರೂಪದ ದಾಖಲೆಗಳನ್ನು ಒದಗಿಸಬೇಕು. ಇದರಿಂದ ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ' ಎಂದು ಅಗರವಾಲ್ ಪರ ವಕೀಲೆ ಸಾಶ ವಾಸ್ ಹೇಳಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ, ವಿಚಾರಣೆಯನ್ನು ಅಕ್ಟೋಬರ್ 2ಕ್ಕೆ ಮುಂದೂಡಿದರು. ಲೈಂಗಿಕ ಹಲ್ಲೆ ಆರೋಪ ಎದುರಿಸುತ್ತಿರುವ ಅಗರವಾಲ್ ಅವರನ್ನು ಸದ್ಯ ಲಂಡನ್‌ನ ಕಾರಾಗೃಹದಲ್ಲಿ ಇರಿಸಲಾಗಿದೆ.

