ಕಾಸರಗೋಡು: ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಕನಸು ಬಿತ್ತುವುದರ ಜತೆಗೆ ಮನೋಬಲ ತುಂಬುವ ಮಾತೃ ಹೃದಯದ ಶಿಕ್ಷಕರ ಸೇವೆ ಅನಿವಾರ್ಯ ಎಂದು ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ. ಎಂ ತಿಳಿಸಿದ್ದಾರೆ.
ಅವರು ಕಾಸರಗೋಡು ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಅನೇಕ ಮಂದಿ ಅಧ್ಯಾಪಕರು ತಮ್ಮಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಹಿಂದೇಟುಹಾಕುತ್ತಿದ್ದಾರೆ. ನಮಗೆ ಅನ್ನ, ಉದ್ಯೋಗ, ಒಳ್ಳೆಯ ಜೀವನ ಒದಗಿಸಿದ ಕನ್ನಡಕ್ಕೆ ನಮ್ಮ ಕೊಡುಗೆ ಏನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಇಂದು ಅನೇಕ ಮಂದಿ ಶಿಕ್ಷಕರಿಗೆ ಸಮಸ್ಯೆ ಎದುರಾದಾಗ ಮಾತ್ರ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆ ನೆನಪಿಗೆ ಬರುತ್ತಿರುವುದು ವಿಷಾದನೀಯ.
ಕೇರಳ ಸಹಿತ ದೇಶದ ಅನೇಕ ಕೇಂದ್ರಗಳಲ್ಲಿ ರೋಬೋಟ್ ಶಿಕ್ಷಕರಿಂದ ಶಿಕ್ಷಣ ಪ್ರಯೋಗ ನಡೆಯುತ್ತಿದ್ದು, ಇದರಿಂದ ದುಗುಡ ತುಂಬಿದ ವಿದ್ಯಾರ್ಥಿಗಳ ಮನಸು ತಿಳಿಯಲು ಅಸಾಧ್ಯ ಎಂದು ತಿಳಿಸಿದರು.
ಸಂಘಟನೆಯ ಬೇಕಲ- ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷ ವಿಠಲ ಅಡ್ವಳ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಪುಂಡರೀಕಾಕ್ಷ ಆಚಾರ್ಯ, ಕಾಸರಗೋಡು ಕನ್ನಡ ಸಂಸ್ಕøತಿ ಮತ್ತು ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಸತ್ಯನಾರಾಯಣ ರಾವ್, ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ವಿಶಾಲಾಕ್ಷ ಪುತ್ರಕಳ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.ನಿವೃತ್ತ ಶಿಕ್ಷಣ ಉಪನಿರ್ದೇಶಕ ಡಿ. ಮಹಾಲಿಂಗೇಶ್ವರ ರಾಜ್,ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ ಎ., ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ,ಉಪಜಿಲ್ಲಾ ಉಪಾಧ್ಯಕ್ಷೆ ವಿಜಯಕುಮಾರಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಯಶೋದ ಕೆ.ಎ, ನಿವೃತ್ತ ಮುಖ್ಯ ಶಿಕ್ಷಕಿ ಶೋಭಾರಾಣಿ ಟೀಚರ್ ಉಪಸ್ಥಿತರಿದ್ದರು. ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲೆಯ ಎಲ್ಲೆಸ್ಸೆಸ್, ಯುಎಸ್ಸೆಸ್ ವಿಜೇತ ವಿದ್ಯಾರ್ಥಿಗಳನ್ನು ಸಮ್ಮೇಳನದಲ್ಲಿ ಅಭಿನಂದಿಸಲಾಯಿತು.
ಕೇಂದ್ರ ಸಮಿತಿ ಅಧಿಕೃತ ವಕ್ತಾರ ಬಾಬು. ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ.ಯಂ ಸ್ವಾಗತಿಸಿದರು. ಕಾಸರಗೋಡು ಉಪಜಿಲ್ಲಾ ಕೋಶಾಧಿಕಾರಿ ಸುರೇಖಾ ಕೆ. ಕಾರ್ಯಕ್ರಮ ನಿರೂಪಿಸಿದರು. ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರದೀಪ್ ಕೆ.ವಿ ವಂದಿಸಿದರು. ಬಳಿಕ ಕಾಸರಗೋಡು ಉಪಜಿಲ್ಲಾ ಅಧ್ಯಕ್ಷ ಕುಶ ಪಿ. ಎಲ್ ಅವರ ಅಧ್ಯಕ್ಷತೆಯಲ್ಲಿ ಪ್ರತಿನಿಧಿ ಸಮ್ಮೇಳನ ನಡೆಯಿತು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ವಿನೋದ್ ರಾಜ್ ಪಿ.ಕೆ, ಉಪಜಿಲ್ಲಾ ಉಪಾಧ್ಯಕ್ಷೆ ರೋಹಿತಾಕ್ಷಿ ಉಪಸ್ಥಿತರಿದ್ದರು. ವರದಿ,ಲೆಕ್ಕಪತ್ರ ಮಂಡನೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.



