ಬದಿಯಡ್ಕ: ಬದಿಯಡ್ಕದಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಕ್ಯಾನ್ ಹಾಗೂ ಬೆಂಕಿ ಪೆಟ್ಟಿಗೆಯೊಂದಿಗೆ ಬಿಎಸ್‍ಎನ್‍ಎಲ್ ಟವರ್‍ನ ಮೇಲೇರಿ ಆತ್ಮಹತ್ಯೆ ಬೆದರಿಕೆಯೊಡ್ಡುವ ಮೂಲಕ ಪೊಲೀಸ್, ಅಗ್ನಿಶಾಮಕದಳ ಹಾಗೂ ಸ್ಥಳೀಯರನ್ನು ಆತಂಕಕ್ಕೆ ತಳ್ಳಿದ ಘಟನೆ ನಡೆದಿದೆ.
ಈ ಹಿಂದೆ ಬದಿಯಡ್ಕ ಪೇಟೆಯಲ್ಲಿ ಸ್ಟುಡಿಯೋ ನಡೆಸುತ್ತಿದ್ದ ನಾರಂಪಾಡಿ ಸನಿಹದ ನೆಲ್ಲಿಯಡ್ಕ ನಿವಾಸಿ ಮೋಹನ್‍ದಾಸ್ ಎಂಬವರು ಬದಿಯಡ್ಕ ಪೇಟೆಯಲ್ಲಿ ಬಿವರೇಜಸ್ ಮಧ್ಯದಂಗಡಿ ಸಮೀಪದಲ್ಲಿರುವ ಟವರ್ ಮೇಲೇರಿ ಆತಂಕಸೃಷ್ಟಿಸಿದ ವ್ಯಕ್ತಿ.
ಮಂಗಳವಾರ ಬೆಳಗ್ಗೆ 6ಕ್ಕೆ ಟವರ್‍ಗೆ ಏರುತ್ತಿರುವುದನ್ನು ಕಂಡ ಸ್ಥಳೀಯರು ಆಗಮಿಸುತ್ತಿದ್ದಂತೆ ಮೋಹನ್‍ದಾಸ್ ಮತ್ತಷ್ಟುಮೇಲಕ್ಕೇರಿ, ಅಧಿಕಾರಿಗಳು ತನ್ನ ಬೇಡಿಕೆ ಈಡೇರಿಸದಿದ್ದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ, ಯಾರಾದರೂ ಟವರ್ ಮೇಲೇರಲು ಪ್ರಯತ್ನಿಸಿದಲ್ಲಿ ಪೆಟ್ರೋಲ್ ಮೈಗೆ ಸುರಿದು ಬೆಂಕಿಹಚ್ಚಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಆದರೆ ಟವರ್ ಮೇಲಿಂದ ಮಾತನಾಡುತ್ತಿರುವುದು ಅಸ್ಪಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ವಿಷಯ ತಿಳಿದು ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕದಳ ಹಾಗೂ ಬದಿಯಡ್ಕ ಪೆÇಲೀಸರು ಸಮಾಧಾನಪಡಿಸಿ ಕೊನೆಗೂ ಮೋಹನ್‍ದಾಸ್ ಅವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಎರಡು ಬಾರಿ ಇದೇ ಟವರಿಗೆ ಏರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದರು. ಅಲ್ಲದೆ ಮುಖ್ಯ ರಸ್ತೆಯ ಪಂಚಾಯಿತಿ ಕಚೇರಿ ಸನಿಹ ಈ ಹಿಂದೆ ಇದ್ದ ಬೃಹತ್ ಮರವೊಂದಕ್ಕೆ ಬಟ್ಟೆಯಿಂದ ಜೋಕಾಲಿ ನಿರ್ಮಿಸಿ ಅದರಲ್ಲಿ ಮಲಗಿ ನಿರಂತರ ನಿರಾಹಾರ ಪ್ರತಿಭಟನೆಯನ್ನೂ ನಡೆಸಿದ್ದರು.
ಮೋಹನ್‍ದಾಸ್ ಅವರು ನೀರ್ಚಾಲು ಗ್ರಾಮದ ಮೂಕಂಪಾರೆಯಲ್ಲಿ ಒಂದು ಎಕರೆ 14 ಸೆಂಟ್ಸ್ ವಿಸ್ತೀರ್ಣದ ಜಮೀನನ್ನು ಹೊಂದಿದ್ದಾರೆ. ಈ ಪೈಕಿ ಕೇವಲ 14 ಸೆಂಟ್ಸ್ ಜಮೀನಿಗೆ ಮಾತ್ರ ಅವರ ಬಳಿ ಮಾಲೀಕತ್ವದ ದಾಖಲೆ (ಟೈಟಲ್ ಡೀಡ್)ಹೊಂದಿದ್ದು, ಉಳಿದ ಜಾಗಕ್ಕೂ ಮಾಲೀಕತ್ವದ ದಾಖಲೆ ನೀಡುವಂತೆ ಒತ್ತಾಯಿಸಿ ಮೋಹನ್‍ದಾಸ್ ಅವರು ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಅನೇಕ ಮನವಿಗಳನ್ನು ಸಲ್ಲಿಸಿದ್ದರು. ಈ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಮೋಹನ್‍ದಾಸ್ ಅವರು ಈ ರೀತಿಯ ವಿಶಿಷ್ಟ ಪ್ರತಿಭಟನೆ ನಡೆಸುತ್ತಾ ಬರುತ್ತಿದ್ದಾರೆ.




