ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ದೋಣಿಯೊಳಗೆ ಕುಸಿದು ಬಿದ್ದು ಮೀನುಗಾರ ಸಾವನ್ನಪ್ಪಿದ್ದಾರೆ. ಕಾಸರಗೋಡಿನ ಅಡ್ಡತ್ತಬೈಲ್ ಸತ್ಯನಾರಾಯಣ ಮಠದ ಸನಿಹದ ಕೃಷ್ಣ ನಿಲಯದ ದಿ. ಕೃಷ್ಣ ಎಂಬವರ ಪುತ್ರ ಕೆ. ಬಾಬು (60) ಮೃತಪಟ್ಟವರು.
ಎಂಟು ಜನರನ್ನೊಳಗೊಂಡ ಮೀನುಕಾರ್ಮಿಕರ ತಂಡ ಮಂಗಳವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ಅಲ್ಪ ಮುಂದೆ ಸಾಗುತ್ತಿದ್ದಂತೆ ಎದೆನೋವು ಕಾಣಿಸಿಕೊಂಡ ಬಾಬು ದೋಣಿಯಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ದೋಣಿಯಲ್ಲಿ ದಡಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಿರಲಿಲ್ಲ. ಬಾಬು ಅವರು ಕಾಸರಗೋಡು ಕಡಪ್ಪುರಂನ ಶ್ರೀ ಕುರುಂಬಾ ಭಗವತೀ ದೇವಸ್ಥಾನ ಸಮಿತಿ ಉಪಾಧ್ಯಕ್ಷರಾಗಿದ್ದರು.

