ಸಿಂಗಪುರ: ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗುಗಳ ಸಂಚಾರ ವಾರಾಂತ್ಯದಲ್ಲಿ ದಿನಕ್ಕೆ ಒಂದಂಕಿಗೆ ಇಳಿದಿದೆ. ಕಳೆದ 10 ದಿನಗಳಲ್ಲಿ ದಿನಕ್ಕೆ ಸರಾಸರಿ 14 ಹಡಗುಗಳು ಸಂಚರಿಸುತ್ತಿದ್ದವು ಎಂದು ಸೋಮವಾರ ಬಿಡುಗಡೆಯಾದ ಪ್ರಾಥಮಿಕ ಹಡಗು ಸಂಚಾರ ದತ್ತಾಂಶ ತಿಳಿಸಿದೆ.
ವಾರಾಂತ್ಯದಲ್ಲಿ ನಾಲ್ಕು ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಕೊಲ್ಲಿಯಿಂದ ಹೊರಬಂದಿವೆ. ಇವುಗಳಲ್ಲಿ ಎಲ್‌ಪಿಜಿ, ರಸಗೊಬ್ಬರ ಹಾಗೂ ಕಚ್ಚಾ ತೈಲ ಅಥವಾ ಕಂಡೆನ್ಸೇಟ್ ಸಾಗಿಸುತ್ತಿದ್ದ ಹಡಗುಗಳು ಸೇರಿವೆ. ಇದೇ ಅವಧಿಯಲ್ಲಿ 10 ಹಡಗುಗಳು ಜಲಸಂಧಿ ಮೂಲಕ ಕೊಲ್ಲಿಯೊಳಗೆ ಪ್ರವೇಶಿಸಿವೆ.
ತಮ್ಮ ಸ್ಥಳ ಮತ್ತು ಸಂಚಾರದ ಮಾಹಿತಿ ಪತ್ತೆಯಾಗದಂತೆ ಎಐಎಸ್ ಸಾಧನಗಳನ್ನು ಸ್ಥಗಿತಗೊಳಿಸಿ ಜಲಸಂಧಿ ದಾಟಿದ ಹಡಗುಗಳನ್ನು ಈ ಲೆಕ್ಕಕ್ಕೆ ಪರಿಗಣಿಸಲಾಗಿಲ್ಲ.
ಭಾನುವಾರ ಹೊರ್ಮುಜ್ ಜಲಸಂಧಿ ಮೂಲಕ ಸಾಗುತ್ತಿದ್ದ ಹಡಗೊಂದಕ್ಕೆ ವಸ್ತುವೊಂದು ಬಡಿದಿದೆ ಎಂದು ಬ್ರಿಟನ್‌ನ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ತಿಳಿಸಿದೆ. ಘಟನೆಯಲ್ಲಿ ಹಡಗಿನಲ್ಲಿದ್ದ ಸಿಬ್ಬಂದಿಯ ಸ್ಥಿತಿ, ಹಡಗಿಗೆ ಉಂಟಾದ ಹಾನಿ ಹಾಗೂ ಪರಿಸರದ ಮೇಲಾದ ಪರಿಣಾಮದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಇದೇ ವೇಳೆ, ಹೊರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ತಗ್ಗಿಸಲು ನೆರವಾಗುತ್ತಿದ್ದ ಸೌದಿ ಅರೇಬಿಯಾದ ಪ್ರಮುಖ ಪೂರ್ವ-ಪಶ್ಚಿಮ ತೈಲ ಪೈಪ್‌ಲೈನ್ ವ್ಯವಸ್ಥೆಯು, ಇರಾಕ್ ನಡೆಸಿದ ಡ್ರೋನ್ ದಾಳಿಯ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರುವರಿ 28ರಂದು ಇರಾನ್ ಯುದ್ಧ ಆರಂಭವಾಗುವ ಮೊದಲು ಹೊರ್ಮುಜ್ ಜಲಸಂಧಿಯಲ್ಲಿ ದಿನಕ್ಕೆ ಸಾಮಾನ್ಯವಾಗಿ ಸುಮಾರು 125 ದೊಡ್ಡ ವಾಣಿಜ್ಯ ಹಡಗುಗಳು ಸಂಚರಿಸುತ್ತಿದ್ದವು. ಜುಲೈ ಮಧ್ಯದಲ್ಲಿ ಇರಾನ್‌ಗೆ ಸಂಬಂಧಿಸಿದ ಹಡಗುಗಳ ಮೇಲಿನ ಅಮೆರಿಕದ ನಿರ್ಬಂಧವನ್ನು ಮರು ಜಾರಿಗೊಳಿಸಿದ ಬಳಿಕ ಇರಾನ್‌ನ ಕಚ್ಚಾ ತೈಲ ರಫ್ತು ಸ್ಥಗಿತಗೊಂಡಿದೆ.
ಆಧಾರ: ರಾಯಿಟರ್ಸ್

